26ರಂದು ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣೆ

Published on

ಅರಕಲಗೂಡು: ತಾಲೂಕಿನ ಬೈಚನಹಳ್ಳಿ ಗ್ರಾಮದಲ್ಲಿ ಆ.26ರಂದು ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಮುಖಂಡ ಗಾಂಧಿನಗರ ದಿವಾಕರ್ ತಿಳಿಸಿದರು.

ದೇವರಹಟ್ಟಿ ಹೆಸರಿನಲ್ಲಿ ಶಾಸಕ ಎ. ಮಂಜು ಅವರು ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ನೀಡುತ್ತಿದ್ದರು. ಇದರಿಂದ ಪ್ರೇರೇಪಣೆಗೊಂಡು ನಾನೂ ಕೂಡ ಕಳೆದ 4 ವರ್ಷದಿಂದ ಸತತವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಿಸುತ್ತಾ ಬಂದಿದ್ದೇನೆ. ಈ ವರ್ಷ ಕಸಬಾ ಮತ್ತು ಮಲ್ಲಿಪಟ್ಟಣ ಹೋಬಳಿ ಶಾಲೆಗಳಿಗೆ ನೀಡುತ್ತಿರುವುದಾಗಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಅನುದಾನ ಬರುತ್ತಿಲ್ಲ. ಈ ನಿಟ್ಟಿನಲ್ಲಿ ನಾವು ಅಳಿಲು ಸೇವೆ ಮಾಡಬೇಕೆಂದು ಕಾರ್ಯಕ್ರಮ ಮಾಡುತ್ತಿದ್ದೇನೆ. ಕಳೆದ ಬಾರಿ ದತ್ತು ಪಡೆದ ಶಾಲೆ ಮಕ್ಕಳು ಕಂಪ್ಯೂಟರ್ ಜ್ಞಾನ ಬೆಳೆಸಿಕೊಳ್ಳಲೆಂದು ಕಂಪ್ಯೂಟರ್ ವ್ಯವಸ್ಥೆ ಮಾಡಿಸಿ, ಶಿಕ್ಷಕರ ನೇಮಿಸಲಾಗಿತ್ತು. ಶಾಸಕ ಎ. ಮಂಜು ಅವರ ಪತ್ನಿ ತಾರಾ ಅವರು ಆರಂಭಿಸಿರುವ ಮಕ್ಕಳ ಮನೆಗೆ ಹೆಚ್ಚಿನ ಸವಲತ್ತುಗಳನ್ನು ಒದಗಿಸುತ್ತಿದ್ದಾರೆ. ದಾನಿಗಳು ಕೈಜೋಡಿಸಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ಕೊರತೆಯಾಗುವುದಿಲ್ಲ ಎಂದರು.

ತಾಪಂ ಮಾಜಿ ಅಧ್ಯಕ್ಷ ನರಸೇಗೌಡ, ಮುಖಂಡರಾದ ಶಿವಣ್ಣ, ಬಾಣದಹಳ್ಳಿ ಗಣೇಶ್, ಕೃಷ್ಣೆಗೌಡ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net