

ಕೊಳ್ಳೇಗಾಲ: ಪಟ್ಟಣದ ಭೀಮನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶುಕ್ರವಾರ ರೋಟರಿ ಸಂಸ್ಥೆ ವತಿಯಿಂದ ನೋಟ್ ಬುಕ್ ವಿತರಣೆ ಮಾಡಲಾಯಿತು.
ರೋಟರಿ ಸಂಸ್ಥೆಯ ಅಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಬಿ.ಮಹದೇವ ಮಾತನಾಡಿ, ಬಡ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳೆ ಇಲ್ಲಿ ವ್ಯಾಸಾಂಗ ಮಾಡುವುದರಿಂದ ಶಿಕ್ಷಣಕ್ಕೆ ಸಹಕಾರಿ ಆಗಲಿ ಎಂಬ ಉದ್ದೇಶದಿಂದ ನೋಟ್ ಬುಕ್, ಲೇಖನ ಪರಿಕರಗಳನ್ನು ವಿತರಣೆ ಮಾಡಿದ್ದೇವೆ ಎಂದರು.
ಪ್ರಸ್ತುತ ಶಿಕ್ಷಣ ಪಡೆಯುವುದು ಅತ್ಯಗತ್ಯವಾಗಿದೆ. ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಶಿಕ್ಷಣವೇ ಆಸ್ತಿ. ಆದ್ದರಿಂದ ಮಕ್ಕಳು ಓದಿನ ಕಡೆ ಹೆಚ್ಚಿನ ಗಮನಹರಿಸಬೇಕು. ಹುಟ್ಟಿದ್ದ ಊರು, ಶಾಲೆಗೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ರೋಟರಿ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ.ಪ್ರಕಾಶ್, ನಿವೃತ್ತ ಬ್ಯಾಂಕ್ ಅಧಿಕಾರಿ ಬಸವ ರಾಜು ಹಾಗೂ ಪುಟ್ಟರಸ ಶೆಟ್ಟಿ, ಶಾಲೆಯ ಮುಖ್ಯ ಶಿಕ್ಷಕಿ ಹೇಮಲತಾ, ಸಹ ಶಿಕ್ಷಕರಾದ ಸುವರ್ಣಿ, ವರಲಕ್ಷ್ಮೀ ಇದ್ದರು.