ಶಾಲಾ ಮಕ್ಕಳಿಗೆ ಮೂರು ದಿನ ರಾಗಿ ಮಾಲ್ಟ್ ವಿತರಣೆ

24ark -7
Published on

ಅರಕಲಗೂಡು: ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ನೀಗಿಸಿ ದೈಹಿಕ ಮತ್ತು ಮಾನಸಿಕ ಕ್ಷಮತೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ರಾಗಿ ಮಾಲ್ಟ್ ಮಿಕ್ಸ್ ನೀಡುವ ಯೋಜನೆ ಹಮ್ಮಿಕೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದೇವರಾಜ್ ತಿಳಿಸಿದರು.


ಪಟ್ಟಣದ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ರಾಗಿಮಾಲ್ಟ್ ಮಿಕ್ಸ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ನಿವಾರಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ರಾಗಿ ಮಾಲ್ಟ್ ಮಿಕ್ಸ್ ಉತ್ತಮ ಪೌಷ್ಟಿಕ ಆಹಾರವಾಗಿದೆ ಎಂದರು.


ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸಿ.ಎ.ರಂಗಸ್ವಾಮಿ ಮಾತನಾಡಿ, ಪ್ರತಿ ವಿದ್ಯಾರ್ಥಿಗೆ 5 ಗ್ರಾಂ ನಂತೆ ರಾಗಿ ಮಾಲ್ಟ್ ಮಿಕ್ಸ್ ಅನ್ನು ಹಾಲಿನೊಂದಿಗೆ ಕುದಿಸಿ ವಾರಕ್ಕೆ ಮೂರು ದಿನ ನೀಡಲಾಗುವುದು. ತಾಲೂಕಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಒಂದರಿಂದ 10ನೇ ತರಗತಿಯ 14371 ಮಕ್ಕಳು ಇದರ ಉಪಯೋಗ ಪಡೆಯಲಿದ್ದಾರೆ ಎಂದರು.


ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಡಿ.ವೀಣಾ ಅಧ್ಯಕ್ಷತೆ ವಹಿಸಿದ್ದರು. ಪಪಂ ಸದಸ್ಯೆ ಪಲ್ಲವಿ, ಕ್ಲಸ್ಟರ್ ಸಂಪನ್ಮೂಲ ಸಮನ್ವಯಾಧಿಕಾರಿ ಬಾಲರಾಜ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್, ಸರ್ಕಾರಿ ನೌಕರರ ಸಹಕಾರ ಸಂಘದ ಅಧ್ಯಕ್ಷ ಹನ್ಯಾಳು ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲೋಕೇಶ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಕಾಂತರಾಜ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸಂಜೀವ್‌ಕುಮಾರ್, ಮುಖ್ಯಶಿಕ್ಷಕ ಜಿ.ಪಿ.ವಸಂತ್, ತಾಲೂಕು ಅಡುಗೆ ಸಿಬ್ಬಂದಿ ಸಂಘದ ಅಧ್ಯಕ್ಷೆ ಯಶೋದಮ್ಮ, ಉಪ ಪ್ರಾಂಶುಪಾಲ ಬೋರಣ್ಣಗೌಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net