ರೋಗಿಗಳಿಗೆ ಹಾಲು, ಬ್ರೆಡ್ ವಿತರಣೆ

ರೋಗಿಗಳಿಗೆ ಹಾಲು, ಬ್ರೆಡ್ ವಿತರಣೆ
Published on

ಬೇಲೂರು: ಕರ್ನಾಟಕ ಮಾನವ ಬಂಧುತ್ವ ವೇದಿಕೆ ತಾಲೂಕು ಘಟಕದಿಂದ ನಾಗರಪಂಚಮಿ ಅಂಗವಾಗಿ ಬಸವ ಪಂಚಮಿ ಹೆಸರಲ್ಲಿ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಮಂಗಳವಾರ ವೈದ್ಯರು ಹಾಗೂ ಗಣ್ಯರ ಸಮ್ಮುಖದಲ್ಲಿ ಹಾಲು ಬ್ರೆಡ್ ವಿತರಿಸುವ ಮೂಲಕ ಬಸವ ಪಂಚಮಿ ಆಚರಿಸಿದರು.

ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಜಯಲಕ್ಷ್ಮೀ ಮಾತನಾಡಿ, ಮಾನವ ಬಂಧುತ್ವ ವೇದಿಕೆಯಿಂದ ರೋಗಿಗಳಿಗೆ ಹಾಲು, ಬ್ರೆಡ್ ವಿತರಿಸಿ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕಾರಣ ಹಾವುಗಳು ಹಾಲನ್ನು ಕುಡಿಯುವುದಿಲ್ಲ. ಆದರೂ ಹಾಲನ್ನು ಹುತ್ತಕ್ಕೆ ಎರೆದು ಹಾಳು ಮಾಡುತಿದ್ದೇವೆ. ಆದರೆ ದೇಶದಲ್ಲಿ ಸಾಕಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತಿದ್ದಾರೆ. ಈ ಹಾಲಿನಲ್ಲಿ ಕಾರ್ಬೋಹೈಡೆಟ್, ಪ್ರೋಟೀನ್ ಸೇರಿದಂತೆ ಮಕ್ಕಳಿಗೆ ಏನು ಬೇಕು ಅದೆಲ್ಲ ಇರುತ್ತೆ. ಹಾಲನ್ನು ವ್ಯರ್ಥ ಮಾಡದೆ ಒಳ್ಳೆಯ ಉದ್ದೇಶಕ್ಕೆ ಬಳಸಿದರೆ ಸಾರ್ಥಕವಾಗುತ್ತದೆ. ಮತ್ತು ನಮ್ಮಲ್ಲಿ ಅಡಗಿರುವ ಮೂಢನಂಬಿಕೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಸಹಕಾರಿಯಾಗಿದೆ. ಆದ್ದರಿಂದ ಹಾಲನ್ನು ರೋಗಿಗಳಿಗೆ ಹಾಗೂ ಮಕ್ಕಳಿಗೆ ಕೊಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, ನಮ್ಮ ದೇಶದಲ್ಲಿ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತಿದ್ದಾರೆ. ಪ್ರಮುಖವಾಗಿ ಮಗು ಹುಟ್ಟಿದಾಗ ತಾಯಿಯ ಹಾಲು ಮಗುವಿಗೆ ಅಮೃತವಿದ್ದಂತೆ. ಆರು ತಿಂಗಳವರೆಗೆ ನಿರಂತರವಾಗಿ ಹಾಲು ಕುಡಿಸಬೇಕು. ಅದೇ ರೀತಿ ನಾವು ನಾಗರಪಂಚಮಿ ಹೆಸರಲ್ಲಿ ಹಾಲನ್ನು ಹಾಳು ಮಾಡದೆ ಅವಶ್ಯಕತೆ ಇರುವ ಮಕ್ಕಳಿಗೆ ಕೊಟ್ಟಲ್ಲಿ ನಿಜವಾದ ಅರ್ಥ ಬರುತ್ತದೆ. ವೈಜ್ಞಾನಿಕವಾಗಿ ಹಾವು ಹಾಲು ಕುಡಿಯುವುದಿಲ್ಲ ಎಂಬುದು ಸಾಬೀತಾಗಿದ್ದರೂ, ನಾಗರ ಪಂಚಮಿಯ ಹೆಸರಿನಲ್ಲಿ ಸಾವಿರಾರು ಲೀಟರ್ ಹಾಲನ್ನು ಹುತ್ತಕ್ಕೆ ಹಾಕುತ್ತೇವೆ. ಅದೇ ಹಾಲನ್ನು ಮಕ್ಕಳ ಜತೆ ಹಂಚಿಕೊಂಡರೆ ಒಳ್ಳೆಯದು. ಈ ನಿಟ್ಟಿನಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಆಚರಿಸಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಕ್ಕಳು ಹಾಗೂ ರೋಗಿಗಳಿಗೆ ಹಾಲು ಬ್ರೆಡ್ ಕೊಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ದಸಂಸ(ಅಂಬೇಡ್ಕರ್‌ವಾದ)ವಿಭಾಗೀಯ ಸಂಚಾಲಕ ಲಕ್ಷ್ಮಣ್, ಮಾನವ ಬಂಧುತ್ವ ವೇದಿಕೆ ಸಂಪನ್ಮೂಲ ವ್ಯಕ್ತಿ ಸೌಭಾಗ್ಯ ಆಂತೋಣಿಸ್ವಾಮಿ, ಜಿಲ್ಲಾ ವಿದ್ಯಾರ್ಥಿ ವೇದಿಕೆ ತಾಲೂಕು ಸಂಚಾಲಕ ರಂಜನ್, ಮಂಜುನಾಥ್, ಸಂಜಯ್, ಶಿವಕುಮಾರ್, ಉಮೇಶ್, ಚಂದ್ರು, ಕುಮಾರ್, ನೂರ್ ಅಹಮದ್, ರಮೇಶ್, ಶೇಷಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net