ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ

ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ
Published on

ಹುಣಸೂರು: ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯ 70ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೆಂಗಳೂರಿನ ಯೂತ್ ಫಾರ್ ಸೇವಾ ಸಂಸ್ಥೆ ಮತ್ತು ಡೆಲ್ ಕಂಪನಿ ಸಹಯೋಗದಲ್ಲಿ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಶನಿವಾರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕಗಳು, ಪೆನ್, ಪೆನ್ಸಿಲ್, ಬ್ಯಾಗ್ ಮುಂತಾದವುಗಳನ್ನು ವಿತರಿಸಿ ಮಾತನಾಡಿದ ಯೂತ್ ಫಾರ್ ಸೇವಾ ಸಂಸ್ಥೆಯ ಮುಖ್ಯ ಸಂಯೋಜನಾಧಿಕಾರಿ ಸಿ.ವಿ.ಕೀರ್ತಿ, 2007ರಲ್ಲಿ ವೆಂಕಟೇಶಮೂರ್ತಿಯವರಿಂದ ಸ್ಥಾಪನೆಗೊಂಡಿರುವ ಯೂತ್ ಫಾರ್ ಸೇವಾ ಸಂಸ್ಥೆಯು 18 ವರ್ಷಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ, ಡೈನಿಂಗ್ ಹಾಲ್, ಹೈಟೆಕ್ ಶೌಚಗೃಹ ಮುಂತಾದವುಗಳನ್ನು ಒದಗಿಸುವ ಕಾರ್ಯ ನಡೆಸುತ್ತಿದೆ. ಈ ಸಾಲಿನಲ್ಲಿ ಹುಣಸೂರಿನ ನರಸಿಂಹಸ್ವಾಮಿ ತಿಟ್ಟು ಸರ್ಕಾರಿ ಶಾಲೆ, ಹನಗೋಡು, ಬೋಳೇನಹಳ್ಳಿ, ತರೀಕಲ್ ರಂಗಯ್ಯನಕೊಪ್ಪಲು, ಗಾವಡಗೆರೆ ಸರ್ಕಾರಿ ಶಾಲೆಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಗಿದೆ. ಸಂಸ್ಥೆಯು ಸ್ಟೆಮ್ ಯೋಜನೆಯಡಿ ಶಾಲೆಗಳಲ್ಲಿ ಮೊಬೈಲ್ ಲ್ಯಾಬ್, ಗ್ರಂಥಾಲಯ ಮುಂತಾದವುಗಳನ್ನು ಸ್ಥಾಪಿಸಿಕೊಡಲಾಗುತ್ತಿದೆ. ಅತಿಯಾದ ಮೊಬೈಲ್ ಬಳಕೆ ದುಷ್ಪರಿಣಾಮಗಳು, ಸೈಬರ್ ಕ್ರೈಂ ಕುರಿತಾಗಿ ಅರಿವು ಮೂಡಿಸುವ ಕಾರ್ಯಾಗಾರ ನಡಸಲಾಗುತ್ತಿದೆ. ಚಿಗುರು ಕಾರ್ಯಕ್ರಮದಡಿ ಜಿಲ್ಲಾಮಟ್ಟದಲ್ಲಿ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ಗುರುತಿಸುವ ಕಾರ್ ಮುಖ್ಯವಾಗಿ ಈ ನೆಲದ ಸಂಸ್ಕೃತಿ, ಪರಂಪರೆಗಳನ್ನು ಬಿಂಬಿಸುವ(ಜಾನಪದ) ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬಡವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯಬೇಕು ಮತ್ತು ಅವರ ಸರ್ವಾಂಗೀಣ ವ್ಯಕ್ತಿತ್ವ ವಿಕಸನವೇ ಸಂಸ್ಥೆಯ ಉದ್ದೇಶವಾಗಿದೆ ಎಂದರು.

ಮುಖ್ಯಶಿಕ್ಷಕ ಸಿ.ಎಸ್.ಮಹೇಶ್ ಮಾತನಾಡಿ, ನಮ್ಮ ಶಾಲೆಗೆ ಪೌರಕಾರ್ಮಿಕರ ಕಾಲನಿ, ವಿ.ಪಿ.ಬೋರೆಯಂತಹ ಬಡಕೂಲಿಕಾರ್ಮಿಕರು ವಾಸಿಸುವ ಕಾಲನಿಗಳಿಂದಲೇ ವಿದ್ಯಾರ್ಥಿಗಳು ಬರುತ್ತಾರೆ. ಇಂತಹ ಬಡವಿದ್ಯಾರ್ಥಿಗಳಿಗೆ ಇಂದು ಮರಳುಗಾಡಿನಲ್ಲಿ ಓಯಸಿಸ್ ಎಂಬಂತೆ ಶಿಕ್ಷಣದ ಕುರಿತಾಗಿ ವಿಶ್ವಾಸಾರ್ಹತೆ ಮೂಡಿದೆ. ಅವರ ಮುಖದಲ್ಲಿ ಸಂತಸದ ಮಂದಹಾಸ ಮೂಡಿಸಿದ ಯೂತ್ ಫಾರ್ ಸೇವಾ ಸಂಸ್ಥೆ ಮತ್ತು ಡೆಲ್ ಕಂಪನಿಯ ಎಲ್ಲ ಸ್ವಯಂಸೇವಕರಿಗೂ ಧನ್ಯವಾದಗಳು ಎಂದರು.

ಯೂತ್ ಫಾರ್ ಸೇವಾ ಸಂಸ್ಥೆಯ ದೀಪಕ್ ಆರಾಧ್ಯ, ಜಯಂತ್, ಧನ್ವಿತ್, ಶಶಾಂಕ್, ಎಸ್‌ಡಿಎಂಸಿ ಅಧ್ಯಕ್ಷ ರಘು, ಉಪಾಧ್ಯಕ್ಷರಾದ ಮಮತಾ, ಸೀಮಾ ತಬಸ್ಸುಮ್, ಸಹಶಿಕ್ಷಕರಾದ ಸಿ.ಎಸ್.ಮಮತಾ, ಹೇಮಾವತಿ, ಸಾಹೇರಾ, ಯಶೋಧ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net