

ಸೋಮವಾರಪೇಟೆ: ತಾಲೂಕಿನ ಶಾಂತಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕರಿಗೆ ಉಚಿತ ಕನ್ನಡಕಗಳನ್ನು ಬುಧವಾರ ವಿತರಿಸಲಾಯಿತು. ಮಾಜಿ ಸೈನಿಕ ಜಿ.ಡಿ.ಪೂವಯ್ಯ ಫಲಾನುಭವಿಗಳಿಗೆ ಕನ್ನಡಕ ವಿತರಿಸಿದರು.
ಇತ್ತೀಚೆಗೆ ಶಾಲೆಯಲ್ಲಿ ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ ಲಿಮಿಟೆಡ್ ಪಣಂಬೂರು, ಜಸ್ಟೀಸ್ ಕೆ.ಎಸ್.ಹೆಗ್ಗಡೆ ಚಾರಿಟೆಬಲ್ ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು ಮತ್ತು ಗ್ರಾಮಾಭಿವೃದ್ಧಿ ಮಂಡಳಿ ಕುಮಾರಳ್ಳಿ-ಬಾಚಳ್ಳಿ ವತಿಯಿಂದ ಸಾರ್ವಜನಿಕರಿಗೆ ನೇತ್ರ ತಪಾಸಣಾ ಉಚಿತ ಶಿಬಿರ ನಡೆಸಿ, ಅಗತ್ಯವುಳ್ಳವರಿಗೆ ಕನ್ನಡಕ ನೀಡಲಾಗುವುದು ಎಂದು ತಿಳಿಸಲಾಗಿತ್ತು. ಶಿಬಿರದಲ್ಲಿ 360 ಜನರು ನೇತ್ರ ತಪಾಸಣೆಯಲ್ಲಿ ಪಾಲ್ಗೊಂಡಿದ್ದರು. ಅವರಲ್ಲಿ 240 ಜನರಿಗೆ ಕನ್ನಡಕ ಹಾಗೂ 18 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಬೇಕೆಂದು ತಿಳಿಸಲಾಗಿದ್ದು, ಅದರಂತೆ ಇಂದು ಕನ್ನಡಕ ವಿತರಿಸಲಾಗಿದೆ ಎಂದು ಹೇಳಿದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಗುರುಪ್ರಸಾದ್, ಶಾಂತಳ್ಳಿ ಗ್ರಾಮಾಭಿವೃದ್ಧಿ ಅಧ್ಯಕ್ಷ ಧರ್ಮಪ್ಪ, ಬೆಟ್ಟದಳ್ಳಿ ಗ್ರಾಮಾಭಿವೃದ್ಧಿ ಅಧ್ಯಕ್ಷ ತಮ್ಮಯ್ಯ, ಶಾಲಾ ಮುಖ್ಯ ಶಿಕ್ಷಕ ಪರಮೇಶ್ವರ್ ಸ್ವಾಮಿ, ಶಿಕ್ಷಕ ಸಂತೋಷ್ ಇದ್ದರು.