

ಬಿಡದಿ : ಪುರಸಭಾಯಿಂದ ಏರ್ಪಡಿಸಿದ್ದ ಇ-ಖಾತೆ ಆಂದೋಲನದಲ್ಲಿ ತಮ್ಮ ಆಸ್ತಿಗಳ ದಾಖಲೆ ನೀಡಿ ನೊಂದಾಯಿಸಿಕೊಂಡಿದ್ದವರಿಗೆ ಖಾತಾಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಪುರಸಭಾ ಅಧ್ಯಕ್ಷ ಹರಿಪ್ರಸಾದ್ ತಿಳಿಸಿದರು.
ಪುರಸಭಾ ಕಚೇರಿಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಫಲಾನುಭವಿಗಳಿಗೆ ಇ-ಖಾತಾ ಪತ್ರಗಳನ್ನು ವಿತರಿಸಿ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ನಮ್ಮ ಪುರಸಭಾಯಿಂದ ಎಲ್ಲ ವಾರ್ಡ್‌ಗಳಲ್ಲಿ ಇ-ಖಾತಾ ಆಂದೋಲನವನ್ನು ನಡೆಸಲಾಗಿತ್ತು. ಆಯಾ ವಾರ್ಡ್ ಜನರು ತಮ್ಮ ನಿವೇಶನಗಳ ಇ-ಖಾತೆಗಾಗಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಗಳನ್ನ ಪರಿಶೀಲನೆ ನಡೆಸಿ ದಾಖಲೆಗಳು ಸರಿಯಿದ್ದ ನಿವೇಶನಗಳ ಇ-ಖಾತೆಗಳನ್ನು ಮಾಡಿ ನಿವೇಶನಗಳ ಮಾಲೀಕರಿಗೆ ವಿತರಣೆ ಮಾಡಲಾಗುತ್ತಿದೆ ಎಂದರು.
ಇದೀಗ ಸಾಂಕೇತಿಕವಾಗಿ ಇ-ಖಾತೆಗಳನ್ನು ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಅರ್ಜಿ ಸಲ್ಲಿಕೆ ಮಾಡಿರುವವರಿಗೆ ಖಾತೆ ಪತ್ರಗಳನ್ನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಿದವರು ಪುರಸಭಾ ಕಚೇರಿಗೆ ಬರುವುದು ಬೇಡ. ಅಧಿಕಾರಿಗಳು ಹಾಗೂ ವಾರ್ಡ್‌ಗಳಿಗೆ ಬಂದು ಇ-ಖಾತೆ ಪತ್ರಗಳನ್ನು ವಿತರಣೆ ಮಾಡುತ್ತೇವೆ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಲೋಹೀತ್ ಕುಮಾರ್ ಮಾತನಾಡಿ, ಪುರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಸಲುವಾಗಿ ಪುರಸಭೆಯಿಂದ ಪ್ರತಿ ವಾರ್ಡ್‌ಗಳಲ್ಲಿ ಇ-ಖಾತೆ ಆಂದೋಲನ ಹಮ್ಮಿಕೊಳ್ಳಲಾಗಿತ್ತು. ಈ ಆಂದೋಲನಕ್ಕೆ ಸಾರ್ವಜನಿಕರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದರು.