ಗುಣಮಟ್ಟದ ಹಾಲು ವಿತರಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಿ

24.kkr1(9-24 deri
Published on

ಕಿಕ್ಕೇರಿ: ಕಲಬೆರಕೆರಹಿತ ಶುದ್ಧ ಹಾಲು ಪೂರೈಕೆ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಿ ಎಂದು ಮನ್ಮುಲ್ ನಿರ್ದೇಶಕ ಹಾಗೂ ಶಾಸಕರಾದ ಎಚ್.ಟಿ.ಮಂಜು ಮನವಿ ಮಾಡಿದರು.


ಹೋಬಳಿಯ ಗೂಡೇಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.


ಜಿಲ್ಲೆಯ ರೈತರು ಹೈನೋದ್ಯಮ ಉಳಿಸಿಕೊಂಡು ಬಂದಿರುವುದು ಮಾದರಿಯಾಗಿದೆ. ಹೈನುಗಾರಿಕೆ ಇಲ್ಲದ ಗ್ರಾಮ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿಯೇ ಹೈನುಗಾರಿಕೆಯಲ್ಲಿ ಪ್ರಥಮವಾಗಿದೆ. ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ನಂದಿನಿ ಹಾಲು ಹಾಗೂ ಅದರ ಉತ್ಪನ್ನ ಕಡಿಮೆ ಬೆಲೆಗೆ ಸಿಗುತ್ತಿದ್ದು ಎಲ್ಲರೂ ಬಳಸಲು ಮುಂದಾಗಿ ಎಂದರು.


ಮನ್ಮುಲ್ ನಿರ್ದೇಶಕ ಡಾಲು ರವಿ ಮಾತನಾಡುತ್ತ, ಪಶುಗಳ ಆರೈಕೆ ಮುಖ್ಯವಾಗಿದ್ದು ಕಡ್ಡಾಯವಾಗಿ ರಾಸುಗಳಿಗೆ ವಿಮೆ ಮಾಡಿಸಿ. ಪಶು ಸಂಗೋಪನೆಯನ್ನು ವೈಜ್ಞಾನಿಕವಾಗಿ ಮಾಡಿದ್ದಲ್ಲಿ ಅಧಿಕ ಲಾಭ ಕಾಣಲು ಸಾಧ್ಯವಾಗುತ್ತದೆ. ಹಾಲಿನ ಕೊಬ್ಬಿನ ಅಂಶ 3.5ಕ್ಕಿಂತ ಹೆಚ್ಚಾಗಿರಬೇಕು, ಖನಿಜ ಮಿಶ್ರಣ, ಗೋಧಾರ ಶಕ್ತಿಪುಡಿ, ನೆಕ್ಕು ಬಿಲ್ವೆ, ಜೋಳದ ನುಚ್ಚು ಪಶು ಆಹಾರ, ಹಸಿರು ಮೇವಿನ ಜತೆ ಒಣ ಹುಲ್ಲಿನೊಂದಿಗೆ ಸಮತೋಲನ ಆಹಾರ ನೀಡಿ ಎಂದು ತಿಳಿಸಿದರು.


ಮನ್ಮುಲ್ ವಿಸ್ತರಣಾಧಿಕಾರಿ ಬಸವರಾಜು ಆಯವ್ಯಯ ಮಂಡಿಸಿದರು. ಸಂಘದ ಅಧ್ಯಕ್ಷ ಬೇಲೂರೇಗೌಡ, ಉಪಾಧ್ಯಕ್ಷ ವೆಂಕಟೇಗೌಡ, ನಿರ್ದೇಶಕರಾದ ಕಾಳೇಗೌಡ, ಗೋಪಾಲ್, ಶೇಖರ್, ಮಂಜಪ್ಪ, ಬೋಜೇಗೌಡ, ಕುಮಾರ್, ಬೋಜಯ್ಯ, ಮಂಜುಳಾ, ಜ್ಯೋತಿ, ಜಯಮ್ಮ, ಮನ್ಮುಲ್ ಮಾಜಿ ಅಧ್ಯಕ್ಷ ಚನ್ನಿಂಗೇಗೌಡ, ಸಂಘದ ಕಾರ್ಯದರ್ಶಿ ಅಣ್ಣೇಗೌಡ, ಹಾಲು ಪರೀಕ್ಷಕ ಅಕ್ಷಯ್, ಪುರುಷೋತ್ತಮ್, ಸಚಿನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net