

ರಾಮನಗರ: ದೇವರು ಕೊಟ್ಟರೂ ಪೂಜಾರಿ ಕೊಡುವುದಿಲ್ಲ ಎನ್ನುವ ಸ್ಥಿತಿ ಸದ್ಯಕ್ಕೆ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಖರೀದಿಸಿದ್ದವರದ್ದಾಗಿದೆ.
ನಿವೇಶನ ಖರೀದಿ ಮಾಡಿ 15 ವರ್ಷ ಕಳೆದರೂ ಅವುಗಳನ್ನು ಮಾರಾಟ ಮಾಡುವ ಅಥವಾ ಹೆಸರಿಗೆ ಇ ಖಾತೆ ಮಾಡಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರ ನಡುವೆ, ಪ್ರಾಧಿಕಾರದ ನಿರಂತರ ಪ್ರಯತ್ನ ಹಾಗೂ ಜನಪ್ರತಿನಿಧಿಗಳ ಒತ್ತಾಸೆಯಿಂದಾಗಿ ಸಮಸ್ಯೆಗೆ ಮುಕ್ತಿ ಸಿಕ್ಕಿತ್ತು. ಆದರೆ, ಈಗ ಪೂಜಾರಿ ಬಳಿಯೂ ಕೊಡಲು ತೀರ್ಥ (ಹಣ) ಇಲ್ಲದ ಕಾರಣ ನಿವೇಶನ ಖರೀದಿದಾರರು ಮತ್ತೆ ಸಂಕಷ್ಟ ಎದುರಿಸುವಂತೆ ಆಗಿದೆ.
ಏನಾಗಿತ್ತು?: ಸ್ವಂತ ಸೂರಿಗಾಗಿ ರಾಮನಗರದ ಜೀಗೇನಹಳ್ಳಿ ಬಡಾವಣೆ, ಅರ್ಚಕರಹಳ್ಳಿ ಹೆಲ್ತ್ ಸಿಟಿ ಹಾಗೂ ಚನ್ನಪಟ್ಟಣದ ಸುಣ್ಣಟ್ಟದ ಕಣ್ವ ಬಡಾವಣೆಯಲ್ಲಿ ಪ್ರಾಧಿಕಾರದ 1800 ನಿವೇಶನಗಳನ್ನು ಹಲವರು ಖರೀದಿಸಿದ್ದರು. ಹಂಚಿಕೆಯಾಗಿರುವ ನಿವೇಶನಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತವೆ. ಈ ಪೈಕಿ, ಕಣ್ವ ಬಡಾವಣೆ ಮತ್ತು ಜೀಗೇನಹಳ್ಳಿ ನಿವೇಶನಗಳಿಗೆ ನಕ್ಷೆಯೇ ಇಲ್ಲ. ಅರ್ಚಕರಹಳ್ಳಿ ಜಾಗದ ವಾಲೀಕತ್ವ ಇಂದಿಗೂ ಮೂಲ ಖಾತೆದಾರರ ಹೆಸರಲ್ಲಿದೆ. ಫಲಾನುಭವಿಗಳ ಪಟ್ಟಿಯನ್ನು ಪ್ರಾಧಿಕಾರದ ಸಮಿತಿಯಲ್ಲಿ ಮಂಡಿಸಿ ಅನುಮೋದನೆ ಪಡೆಯದ ಹಿಂದಿನ ಅಧಿಕಾರಿಗಳು, ಹಂಚಿಕೆಗೆ ಸಂಬಂಧಿಸಿದ ದಾಖಲೆಗಳನ್ನು ನಿರ್ವಹಣೆ ವಾಡದೆ ನಿರ್ಲಕ್ಷ್ಯ ತೋರಿದ್ದರು.
ನಿವೇಶನಕ್ಕೆ ಸಂಬಂಧಿಸಿದ ಮೂಲ ಕಡತಗಳೇ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಇಂದಿಗೂ ಖರೀದಿದಾರರಿಂದ ಕಂದಾಯ ಪಾವತಿಸಿಕೊಳ್ಳುತ್ತಿದ್ದರೂ ಬಡಾವಣೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಿಲ್ಲ.
ಬದುಕಿಗೆ ಒಂದು ಸೂರಿರಲಿ ಎಂದು 2009ರಲ್ಲಿ ಖರೀದಿಸಿದ ನಿವೇಶನದ 10 ವರ್ಷಗಳ ಗುತ್ತಿಗೆ ಅವಧಿ ಈಗಾಗಲೇ ಪೂರ್ಣಗೊಂಡಿದೆ. ಆದರೆ, ಇದುವರೆಗೆ ನಮಗೆ ಸೇಲ್ ಡೀಡ್ ಮತ್ತು ಖಾತೆ ಆಗಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿರುವ ಭೂಮಿ ಪ್ರಾಧಿಕಾರಕ್ಕೆ ವರ್ಗಾವಣೆಯಾಗಿಲ್ಲ. ಅಲ್ಲೊಂದು ಮನೆ ನಿರ್ಮಿಸಿಕೊಳ್ಳೋಣ ಎಂದರೆ ಮೂಲಸೌಕರ್ಯಇಲ್ಲ. ಹೀಗಾಗಿ, ಕಷ್ಟ ಕಾಲದಲ್ಲಿ ನಿವೇಶನ ವಾರಾಟ ವಾಡಲಾಗದ ಸ್ಥಿತಿ ನಿವೇಶನದಾರರಿಗೆ ಎದುರಾಗಿದೆ.
ಹಣ ಇಲ್ಲ: ಶಾಸಕ ಇಕ್ಬಾಲ್ ಹುಸೇನ್, ಹಿಂದಿನ ಸಂಸದ ಡಿ.ಕೆ.ಸುರೇಶ್ ಅವರ ಒತ್ತಾಸೆ ಹಾಗೂ ಅಧಿಕಾರಿಗಳ ನಿರಂತರ ಪ್ರಯತ್ನದ ಲವಾಗಿ ನಿವೇಶನದಾರರಿಗೆ ಖಾತೆ ಮಾಡಿಕೊಡಲು ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿತ್ತು.
ಆದರೆ, ಬಡಾವಣೆಗಳಿಗೆ ಮೂಲ ಸೌರ್ಕಯ ಒದಗಿಸಿ ಅವುಗಳನ್ನು ಹಸ್ತಾಂತರ ಮಾಡಲು ಪ್ರಾಧಿಕಾರದ ಬಳಿ ಹಣ ಇಲ್ಲ. ನಿವೇಶನದಾರರಿಂದ ಪ್ರತಿ ಚದರ ಅಡಿಗೆ ಅಂದಾಜು 408 ರೂ. ಮೊತ್ತ ಪಡೆಯಬೇಕಾಗುತ್ತದೆ. ಅದು ಕಷ್ಟಕರ. ಹಾಗಾಗಿ, ಆರ್ಥಿಕ ನೆರವು ನೀಡುವಂತೆ ಬಿಎಂಆರ್‌ಡಿಎಗೆ ಪತ್ರ ಬರೆಯಲಾಗಿದೆ. ಬಡಾವಣೆಗಳಲ್ಲಿ ಮೂಲಸೌಕರ್ಯ ಕಲ್ಪಿಸದ ಹೊರತು ಸೇಲ್ ಡೀಡ್ ವಾಡಿಕೊಡುವುದಿಲ್ಲ ಎಂದು ಸಂಬಂಧಿಸಿದ ಗ್ರಾಮ ಪಂಚಾಯಿತಿಯವರು ತಿಳಿಸಿದ್ದಾರೆ. ಮೂಲಸೌಕರ್ಯ ಅಭಿವೃದ್ಧಿಗೆ ಪ್ರಾಧಿಕಾರದಲ್ಲಿ ಹಣವಿಲ್ಲ. ಕ್ರಯಪತ್ರ ಹಂಚಿಕೆಗಿದ್ದ ತೊಡಕು ನಿವಾರಿಸಿರುವ ಸರ್ಕಾರ ಅನುದಾನ ಕೊಡುವುದಿಲ್ಲ ಎಂದು ಸ್ಪಷ್ಟ್ಟಪಡಿಸಿದೆ.
ಈ ಕುರಿತು, ಬೆಂಗಳೂರು ಮಹಾನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಎಂಆರ್‌ಡಿಎ) ಪತ್ರ ಬರೆದು ಆರ್ಥಿಕ ನೆರವು ಕೋರಿದ್ದು, ಅಲ್ಲಿನ ಪ್ರತಿಕ್ರಿಯೆ ಆಧರಿಸಿ ಮುಂದಿನ ತೀರ್ವಾನ ಕೈಗೊಳ್ಳಲು ಪ್ರಾಧಿಕಾರ ನಿರ್ಧರಿಸಿದೆ.
"ಬಡಾವಣೆಗಳಲ್ಲಿ ಮೂಲಸೌಕರ್ಯ ಕಲ್ಪಿಸದ ಹೊರತು ಸೇಲ್ ಡೀಡ್ ಮಾಡಿಕೊಡುವುದಿಲ್ಲ ಎಂದು ಸಂಬಂಧಿಸಿದ ಗ್ರಾಮ ಪಂಚಾಯಿತಿಯವರು ತಿಳಿಸಿದ್ದಾರೆ. ಮೂಲಸೌಕರ್ಯ ಅಭಿವೃದ್ಧಿಗೆ ಪ್ರಾಧಿಕಾರದಲ್ಲಿ ಹಣವಿಲ್ಲ. ಬೆಂಗಳೂರು ಮಹಾನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಎಂಆರ್‌ಡಿಎ) ಪತ್ರ ಬರೆದು ಆರ್ಥಿಕ ನೆರವು ಕೋರಿದ್ದೇವೆ."
ಎ.ಬಿ. ಚೇತನ್ ಕುಮಾರ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ