ಮುಂಗಾರು ಬೆಳೆ ಹಾನಿ ಪರಿಹಾರ ಶೀಘ್ರ ವಿತರಿಸಿ

24 SGN-01
Published on

ಶಿಗ್ಗಾಂವಿ: ಪ್ರಸಕ್ತ ಮುಂಗಾರಿನಲ್ಲಿ ಸುರಿದ ಅಕಾಲಿಕ ಮಳೆಯಿಂದ ರೈತರು ಅಪಾರ ಹಾನಿ ಅನುಭವಿಸಿದ್ದಾರೆ. ಅಗತ್ಯ ದಾಖಲಾತಿಗಳನ್ನು ನೀಡಿದರೂ ರೈತನಿಗೆ ಪರಿಹಾರ ಹಣ ದೊರಕುತ್ತಿಲ್ಲ. ಆದ್ದರಿಂದ ಸರ್ಕಾರ ಕೂಡಲೆ ಬೆಳೆ ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಬೇಕು ಎಂದು ಆಗ್ರಹಿಸಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆಯಿಂದ ತಹಸೀಲ್ದಾರ್ ಶಿವಾನಂದ ರಾಣೆಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ರೈತ ಸಂಘದ ತಾಲೂಕು ಅಧ್ಯಕ್ಷ ಮುತ್ತು ಗುಡಗೇರಿ ಮಾತನಾಡಿ, ಕೊಯ್ಲಿಗೆ ಬಂತ ಬೆಳೆಗಳು ಶೇ. 70ರಷ್ಟು ಹಾಳಾಗಿವೆ. ಜಿಲ್ಲೆಗೆ ಭೇಟಿ ನೀಡಿದ್ದ ಕೃಷಿ ಸಚಿವರು ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಕೇವಲ ಶೇ. 30ರಿಂದ 40ರಷ್ಟು ರೈತರಿಗೆ ಮಾತ್ರ ಹಣ ದೊರೆತಿದೆ. ಉಳಿದ ರೈತರಿಗೆ ಇದುವರೆಗೂ ಪರಿಹಾರ ದೊರಕಿಲ್ಲ. ಆದ್ದರಿಂದ ಕೂಡಲೆ ರೈತರಿಗೆ ಬೆಳೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.

ಕೋಣನಕೇರಿ ಗ್ರಾಮದ ಹತ್ತಿರ ವಿವೇಕ ಹೆಬ್ಬಾರ ಮಾಲೀಕತ್ವದಲ್ಲಿ ಪ್ರಾರಂಭಿಸುತ್ತಿರುವ ಸಕ್ಕರೆ ಕಾರ್ಖಾನೆಗೆ ತಾಲೂಕಿನ ನಿರುದ್ಯೋಗಿಗಳಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ರೈತ ಸಂಘದ ಉಪಾಧ್ಯಕ್ಷ ಶಂಕರಗೌಡ ಪಾಟೀಲ, ಮಂಜುನಾಥ ಹಾವೇರಿ, ಹನುಮಂತ ಬಂಡಿವಡ್ಡರ, ಈರಣ್ಣ ಸುಣಗಾರ, ಶಂಕ್ರಪ್ಪ ಸವೂರ, ಫಕೀರಪ್ಪ ಸಮಗೊಂಡ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net