ಅರ್ಕಾವತಿ ನದಿ ಒಡಲಲ್ಲಿ ಅವಧಿ ಮೀರಿದ ಔಷಧ ವಿಲೇವಾರಿ

Rmgm-Ph-01-Arkavathibnadi Drugs-Adikarigalu Rmgm -Pariseelane-4-10-2023
Published on

ಹಣ ನೀಡಬೇಕೆಂದು ನದಿಗೆ ಎಸೆದ ವ್ಯಾಪಾರಿ?

ಸಮಯಪ್ರಜ್ಞೆ ಮೆರೆದ ಜಲಮಂಡಳಿ ಅಧಿಕಾರಿ


ರಾಮನಗರ
ನಗರದ ದ್ಯಾವರಸೇಗೌಡನದೊಡ್ಡಿ ಸಮೀಪ ಅರ್ಕಾವತಿ ಸೇತುವೆ ಬಳಿ ನದಿ ನೀರಿನಲ್ಲಿ ರಾಶಿಗಟ್ಟಲೇ ಅವಧಿ ಮೀರಿದ ಔಷಧಗಳು ಕಂಡುಬಂದಿವೆ.

ರಾಮನಗರದ 1ರಿಂದ 11ನೇ ವಾರ್ಡ್‌ಗಳಿಗೆ ಕುಡಿಯುವ ನೀರು ದ್ಯಾವರಸೇಗೌಡನದೊಡ್ಡಿ ಗ್ರಾಮದ ಅರ್ಕಾವತಿ ಸೇತುವೆ ಸಮೀಪದ ಜಲ ಸಂಗ್ರಹಾಗಾರದಿಂದಲೇ ಸರಬರಾಜಾಗುತ್ತದೆ. ಹಳ್ಳಿಮಾಳಕ್ಕೆ ಹೋಗುವ ಸೇತುವೆ ಕೆಳಭಾಗದಲ್ಲಿ ಅಂದಾಜು 3ರಿಂದ 4 ಲಕ್ಷ ರೂ. ಬೆಲೆಬಾಳುವ ಅವಧಿ ಮೀರಿದ ಔಷಧಗಳಿರುವ ಚೀಲಗಳನ್ನು ನದಿಗೆ ಎಸೆಯಲಾಗಿದೆ.

ಜಲಮಂಡಳಿ ಇಂಜಿನಿಯರ್ ಅನಿಲ್ ಅವರು ನದಿಯಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣ ಪರಿಶೀಲನೆಗೆ ಬಂದಾಗ ಔಷಧ ತುಂಬಿದ ಚೀಲಗಳು ಕಂಡುಬಂದಿವೆ. ವಿಷಯ ತಿಳಿಯುತ್ತಲೇ ರಾಮನಗರ ತಾಲೂಕು ಆರೋಗ್ಯಾಧಿಕಾರಿ ಡಾ. ಉಮಾ, ನಗರಸಭೆ ಅಧಿಕಾರಿಗಳು, ನಗರಸಭೆ ಉಪಾಧ್ಯಕ್ಷ ಸೋಮಶೇಖರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ನಂತರ ಔಷಧ ತುಂಬಿದ ಚೀಲಗಳನ್ನು ನದಿಯಿಂದ ಹೊರತೆಗೆಸಿದರು.

ಇವೆಲ್ಲ ಅವಧಿ ಮೀರಿದ ಔಷಧಗಳಾಗಿದ್ದು, ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ನದಿಯಲ್ಲಿ ಎಸೆಯಲಾಗಿದೆ. ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ನದಿ ನೀರಿನಲ್ಲಿ ಯಾವುದೇ ಔಷಧ ಕರಗಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಉಮಾ ತಿಳಿಸಿದರು.

ವಿವಿಧ ಕಂಪನಿಯ ಔಷಧಗಳು, ಮಾತ್ರೆಗಳ ಮೇಲಿದ್ದ ಬ್ಯಾಚ್ ಸಂಖ್ಯೆ ಆಧರಿಸಿ ಪರಿಶೀಲಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ನದಿಯಲ್ಲಿ ದೊರೆತ ಔಷಧದ ಚೀಲಗಳು ಐಜೂರು ಬಡಾವಣೆಯಲ್ಲಿರುವ ಭುವನ್ ಔಷಧ ಸಗಟು ವ್ಯಾಪಾರದ ಅಂಗಡಿಗೆ ಸೇರಿದ್ದವು ಎಂದು ಅಧಿಕಾರಿಗಳು ಗುರುತಿಸಿದ್ದಾರೆ ಎನ್ನಲಾಗಿದೆ.

ಅವಧಿ ಮೀರಿದ ಔಷಧಗಳನ್ನು ನಿಗದಿತವಾಗಿ ವಿಲೇವಾರಿ ಮಾಡಲು ಔಷಧ ಅಂಗಡಿಯವರು ಕಂಪನಿಗಳಿಗೆ ಹಣ ನೀಡಬೇಕಿದೆ. ಆ ಹಣ ಉಳಿಸಲು ಔಷಧ ವ್ಯಾಪಾರಿ ಈ ರೀತಿ ನದಿಗೆ ಎಸೆದಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಗರಸಭೆ ಎಇ ಸುಬ್ರಹ್ಮಣ್ಯ, ಆರೋಗ್ಯ ಶಾಖೆಯ ವಿಜಯ್‌ಕುಮಾರ್, ಜಲಮಂಡಳಿ ಇಂಜಿನಿಯರ್ ಅನಿಲ್, ಜಿಲ್ಲಾ ಔಷಧ ನಿಯಂತ್ರಣಾಧಿಕಾರಿ ಕಚೇರಿ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಹಾಗೂ ನಗರಸಭೆ ಸಿಬ್ಬಂದಿ ಹಾಜರಿದ್ದರು.

ನಗರಸಭೆ ಅಧಿಕಾರಿಗಳ ದೂರು ಆಧಾರದ ಮೇಲೆ ನದಿಗೆ ಎಸೆಯಲಾಗಿರುವ ಔಷಧ ಸಗಟು ವ್ಯಾಪಾರಿ ಮಾಲೀಕನಿಗೆ ನೋಟಿಸ್ ನೀಡಿ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗುವುದು.
ಮಮತಾ, ಸಹಾಯಕ ನಿಯಂತ್ರಕರು, ಜಿಲ್ಲಾ ಔಷಧ ನಿಯಂತ್ರಣ ಇಲಾಖೆ, ರಾಮನಗರ

ಜಲಮಂಡಳಿ ಅಧಿಕಾರಿ ಅನಿಲ್ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಯಾವ ಔಷಧಗಳು ನೀರಿನಲ್ಲಿ ಕರಗಿರದ ಕಾರಣ ಮುಂದಾಗಬಹುದಾಗಿದ್ದ ಸಮಸ್ಯೆ ತಪ್ಪಿದೆ. ನದಿಯಲ್ಲಿ ಪತ್ತೆಯಾಗಿರುವ ಔಷಧಗಳು ಅವಧಿ ಮೀರಿದವುಗಳಾಗಿವೆ. ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ.
ಸೋಮಶೇಖರ್, ನಗರಸಭೆ ಉಪಾಧ್ಯಕ್ಷ , ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net