

ಕೊಳ್ಳೇಗಾಲ: ಜಿಲ್ಲೆಯಲ್ಲಿ ಮಾನಸ ಶಿಕ್ಷಣ ಸಂಸ್ಥೆ ಶಿಸ್ತಿನ ಶಿಕ್ಷಣ ಸಂಸ್ಥೆಯಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ಮಂಜುನಾಥ್ ಪ್ರಸನ್ನ ಹೇಳಿದರು.
ಪಟ್ಟಣದ ಮಾನನ ಶಿಕ್ಷಣ ಸಂಸ್ಥೆಯಲ್ಲಿನ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು. ಮಾನನ ಶಿಕ್ಷಣ ಸಂಸ್ಥೆ ಉತ್ತಮ ಉದ್ದೇಶಗಳನ್ನು ಹೊಂದಿದೆ. ಡಾ.ಎಸ್.ದತ್ತೇಶ್ ಕುಮಾರ್ ಅವರು ಶಿಕ್ಷಣ ಸಂಸ್ಥೆ ರೂವಾರಿಯಾಗಿದ್ದಾರೆ. 2023-24ನೇ ಸಾಲಿನ ಪಿಯುಸಿ ಫಲಿತಾಂಶದಲ್ಲಿ ಕಾಲೇಜಿನ 189 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದರು.
ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿನಿ ಡಾ.ಟಿ.ಎಂ.ಹರ್ಷಿತಾ ನಿಸರ್ಗ ಎಂಬಿಬಿಎಸ್‌ನಲ್ಲಿ ಪ್ರಥಮ ಬ್ಯಾಂಕ್ ಪಡೆದಿರುವುದು ಹೆಮ್ಮೆಯ ವಿಚಾರ. ಡಾ ದತ್ತೇಶ್ ಕುಮಾರ್ ಶಿಕ್ಷಣದ ಪ್ರಗತಿಗೆ ಹೆಚ್ಚು ಒತ್ತು ನೀಡಿದ್ದಾರೆ. ವಿದ್ಯಾರ್ಥಿಗಳು ಸಮಾಜಕ್ಕೆ ದಾರಿದೀಪ ವಾಗಬೇಕು ಎಂದು ಹೇಳಿದರು.
ಡಾ.ಟಿ.ಎಂ. ಹರ್ಷಿತಾ ಮಾತನಾಡಿ, ಯಶಸ್ಸು ಸಾಧಿಸಲು ಪರಿಶ್ರಮ ಅಗತ್ಯ. ಎಂಬಿಬಿಎಸ್ ವ್ಯಾಸಾಂಗ ಸುಲಭದ ದಾರಿಯಲ್ಲ. ಛಲ ಬಿಡದೆ ಓದಿದರೆ ಯಶಸ್ಸು ಖಂಡಿತ ಸಾಧ್ಯ. ಪ್ರಾಯೋಗಿಕ ಅಭ್ಯಾಸಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದರು.
ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್.ದತ್ತೇಶ್‌ಕುಮಾರ್ ಮಾತನಾಡಿ, ಕನಸು ಮತ್ತು ಗುರಿ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಿದರೆ ಖಂಡಿತ ಸಾಧನೆ ಮಾಡಬಹುದು. ಛಲ ಬಿಡದ ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಯಲ್ಲಿ ತೊಡಗಬೇಕು ಎಂದು ಹೇಳಿದರು.
ನಿಸರ್ಗ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಪ್ರಾಂಶುಪಾಲ ಧನಂಜಯ, ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜು ಡಿ.ಕೃಷ್ಣಗೌಡ, ಮುಖ್ಯ ಶಿಕ್ಷಕ ಆರ್.ಶಂಕರ್, ಗಿರಿಜಾ ಲಕ್ಷ್ಮೀ, ಸಂಯೋಜನಾಧಿಕಾರಿ ಡಾ.ಸಿ.ಚಂದ್ರಶೇಖರ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.