

ಬೆಂಗಳೂರು: ಆಧುನಿಕತೆಯ ಭರಾಟೆಯಲ್ಲಿ ಯುವಸಮೂಹ ಸಂವೇದನೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಆಗುಹೋಗುಗಳ ಕುರಿತು ಅವರಲ್ಲಿ ನಿರ್ಲಿಪ್ತತೆ ಮೂಡಿದಂತೆ ಭಾಸವಾಗುತ್ತಿದೆ. ಸಮಾಜದ ಆಗುಹೋಗುಗಳಿಗೆ ನಾನು ಜವಾಬ್ದಾರಿಯುತ ಎನ್ನುವ ಪ್ರಜ್ಞೆಯನ್ನು ಜಾಗೃತಗೊಳಿಸಬೇಕಾದ ಅವಶ್ಯಕತೆ ಇದೆ ಎಂದು ಉತ್ಥಾನ ಮಾಸಪತ್ರಿಕೆ ಸಂಪಾದಕ ಅನಿಲ್ ಕುಮಾರ್ ಮೊಳಹಳ್ಳಿ ಅಭಿಪ್ರಾಯಪಟ್ಟರು.
ಕುಮಾರಸ್ವಾಮಿ ಲೇಔಟ್‌ನಲ್ಲಿರುವ ದಯಾನಂದ ಸಾಗರ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ನಲ್ಲಿ ದಿಶಾ ಭಾರತ್ ಸಂಸ್ಥೆಯ ‘ನನ್ನ ಭಾರತ’ ಪ್ರಯುಕ್ತ ಆಯೋಜಿಸಿದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಒಂದು ರಾಷ್ಟ್ರ ಹೇಗೆ ಯೋಚಿಸುತ್ತದೆ ಎನ್ನುವುದು ಅಲ್ಲಿನ ಯುವಕರು ಹೇಗೆ ಚಿಂತಿಸುತ್ತಾರೆ ಎನುವುದರ ಆಧಾರದ ಮೇಲೆ ನಿರ್ಧರಿತವಾಗುತ್ತದೆ. ಯುವಕರ ಆಲೋಚನೆಗಳನ್ನು ವಿಕಸನಗೊಳಿಸುವುದಕ್ಕೆ ಪ್ರಬಂಧಗಳಂತಹ ಸ್ಪರ್ಧೆಗಳು ಮತ್ತು ಅದಕ್ಕಾಗಿ ಮಾಡುವ ಅಧ್ಯಯನ ಸಹಕಾರಿ. ಪ್ರಬಂಧ ಬರೆಯುವ ಪ್ರಕ್ರಿಯೆ ಸಮಾಜವನ್ನು ಹೇಗೆ ನೋಡಬೇಕು ಎನ್ನುವುದನ್ನು ತಿಳಿಸುತ್ತದೆ. ಪುಸ್ತಕದ ಓದು ನಮ್ಮ ವಿಚಾರಗಳಿಗೆ ವಿಸ್ತಾರವನ್ನು ನೀಡುವುದಲ್ಲದೇ, ನಮ್ಮ ಜೀವನಕ್ಕೆ ನೂತನ ಅನುಭವಗಳನ್ನು ಮತ್ತು ಹೊಸ ದಿಕ್ಕನ್ನು ನೀಡುತ್ತದೆ. ಹಾಗೆಯೇ ನಮ್ಮ ಭಾಷಾ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಹಕರಿಸುತ್ತದೆ. ಇವೆಲ್ಲವೂ ನಮ್ಮ ಜೀವನದ ಗುರಿಯನ್ನು ತಲುಪುವುದಕ್ಕೆ ಬೆಂಬಲಿಸುತ್ತವೆ ಎಂದರು.
ಶಿಕ್ಷಣತಜ್ಞ ಡಾ.ಎಚ್.ಎಸ್. ಗಣೇಶ ಭಟ್ಟ ಮಾತನಾಡಿ, ಜಗತ್ತಿನ ಅತ್ಯಂತ ವೈವಿಧ್ಯಮಯ ಯುವಸಮೂಹ ನಮ್ಮ ರಾಷ್ಟ್ರದಲ್ಲಿದೆ. ಯುವಕರು ತಾವು ಓದಿದ ವಿಷಯಗಳನ್ನು ಅಭಿವ್ಯಕ್ತಿಸುವ ಆತ್ಮವಿಶ್ವಾಸವನ್ನು ರೂಢಿಸಿಕೊಳ್ಳಬೇಕು. ಯುವಸಮೂಹ ಪರಸ್ಪರರನ್ನು ಅರ್ಥ ಮಾಡಿಕೊಂಡು ಜೊತೆಯಾಗಿ ರಾಷ್ಟ್ರದ ಏಳಿಗೆಗೆ ಶ್ರಮಿಸಬೇಕು. ತಮ್ಮ ಅಂತಃಸತ್ವದಲ್ಲಿ ಸಾಧಿಸುವ ಕಿಚ್ಚನ್ನು ಹಚ್ಚಿಕೊಂಡು ಸಾಧನೆಗೈಯುವತ್ತ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಹಾಸನದ ಹುಣಸಿನಕೆರೆಯ ಎ.ಸೂಬಿಯ ಮೆಹಕ್ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನ ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ದ್ವಿತೀಯ, ಬೆಳಗಾವಿಯ ವಕ್ಕುಂದದ ಪ್ರತೀಕ್ಷಾ ಅಶೋಕ ಜಂತಿ ತೃತೀಯ ಸ್ಥಾನವನ್ನು ಪಡೆದುಕೊಂಡರು. ದಕ್ಷಿಣ ಕನ್ನಡದ ರಮಾ ಭಾಗೀರಥೀ, ಬಾಗಲಕೋಟೆಯ ಅಕ್ಷತಾ ಎಸ್ ಹತ್ತಳ್ಳಿ, ಹಾಸನ ಜಿಲ್ಲೆಯ ಶ್ರೇಯ ಕೆ ಆರ್, ಬಳ್ಳಾರಿಯ ಭವಾನಿ ಎಸ್, ಬೆಂಗಳೂರಿನ ಗಿರೀಶ್ ಆರ್, ಮಂಡ್ಯದ ಚಿತ್ತಾರ ಪಟೇಲ್ ಎಸ್ ಪಿ, ಮೈಸೂರಿನ ಕುಸುಮ ಸಿ ಎಂ, ವಿಜಯಪುರದ ರವಿಕುಮಾರ ಎಸ್ ದೊಡಮನಿ, ಉತ್ತರ ಕನ್ನಡದ ಅಶ್ವಿನಿ ಗಜಾನನ ಹೆಗಡೆ, ಉಡುಪಿ ರಕ್ಷಿತ ಹೆಚ್ ಒಟ್ಟು ಹತ್ತು ಮಂದಿ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ಪಡೆದರು.
ದಿಶಾ ಭಾರತ್ ಸಂಸ್ಥೆಯ ಸಂಸ್ಥಾಪಕಿ ರೇಖಾ ರಾಮಚಂದ್ರನ್, ದಯಾನಂದ ಸಾಗರ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ನ ಪ್ರಾಂಶುಪಾಲ ಡಾ.ಎಂ. ಹೇಮಂತ್ ಉಪಸ್ಥಿತರಿದ್ದರು.