

ವಿಜಯವಾಣಿ ಸುದ್ದಿಜಾಲ ಕುಮಟಾ
ತಾಲೂಕಿನ ವನ್ನಳ್ಳಿಯಲ್ಲಿ ಸಿಹಿ ಈರುಳ್ಳಿ ಬೆಳೆಗೆ ವ್ಯಾಪಕವಾಗಿ ಹಾವು ಸುಳಿರೋಗ ಅಥವಾ ಸುಳಿತಿರುಪು ರೋಗ ಹಬ್ಬಿದ್ದು ಈರುಳ್ಳಿ ಬೆಳೆಗಾರರು ಕಂಗಾಲಾಗಿದ್ದಾರೆ.
ವನ್ನಳ್ಳಿಯಲ್ಲಿ ಪ್ರತಿವರ್ಷದಂತೆ ತಾವೇ ಸಿದ್ಧಪಡಿಸಿದ ಬೀಜ ಬಿತ್ತಿ ನಾಟಿ ಮಾಡಿ ಒಂದೂವರೆ ತಿಂಗಳಾಗಿದೆ. ಈಗಲೇ ನೂರಾರು ರೈತರ ಗದ್ದೆಗಳಲ್ಲಿ ಹಾವು ಸುಳಿ ರೋಗ ಕಾಡಿದೆ. ಸುಳಿಗಳು ಕೊಳೆತು ಗಿಡಗಳು ಮಕಾಡೆ ಮಲಗುತ್ತಿವೆ. ಸ್ಥಳೀಯ ಈರುಳ್ಳಿ ಬೆಳೆಗಾರ ಸುರೇಶ ಮಂಜಯ್ಯ ನಾಯ್ಕರ ಗದ್ದೆಯಲ್ಲಿ ವಾರದ ಹಿಂದೆಯೇ ನಾಟಿ ಸಸಿಯ ಸುಳಿಗಳು ಕೊಳೆಯಲಾರಂಭಿಸಿ ಇದೀಗ ಸಂಪೂರ್ಣ ಗದ್ದೆಗೆ ವ್ಯಾಪಿಸಿದೆ. ತಿಮ್ಮಣ್ಣ ಬೀರಪ್ಪ ನಾಯ್ಕ, ಬಾಬಾ ನಾಗಪ್ಪ ನಾಯ್ಕರ ಗದ್ದೆಯಲ್ಲೂ ರೋಗ ಉಲ್ಬಣಿಸಿದ್ದು ರೋಗ ತಗುಲಿದ ಸಸಿಗಳನ್ನು ಕಿತ್ತು ಬೇರ್ಪಡಿಸಿದರೂ ಹತೋಟಿಗೆ ಬರುತ್ತಿಲ್ಲ.
ತೋಟಗಾರಿಕೆ ಇಲಾಖೆಯವರು ಪರಿಶೀಲಿಸಿ, ಸಸಿಗಳನ್ನು ರಕ್ಷಿಸಲು ಸಲಹೆ ನೀಡಿದ್ದಾರೆ. ಆದರೆ, ರೋಗ ಹಬ್ಬುತ್ತಲೇ ಇದೆ. ಇನ್ನೊಂದೆಡೆ ಹಂದಿಗಳ ಕಾಟದಿಂದ ಸೋತು ಸುಣ್ಣವಾಗಿದ್ದೇವೆ ಎಂದು ರೈತರು ವಿಜಯವಾಣಿಗೆ ತಿಳಿಸಿದ್ದಾರೆ.
ತರಬೇತಿ ಕಾರ್ಯಕ್ರಮ ಇಂದು: ಈರುಳ್ಳಿ ಬೆಳೆಗಾರರಿಗೆ ಸೂಕ್ತ ಮಾಹಿತಿ ಜಾಗೃತಿ ನೀಡುವ ಸಲುವಾಗಿ ಫೆ.10 ರಂದು ಬೆಳಗ್ಗೆ 10-30 ರಿಂದ ವನ್ನಳ್ಳಿಯಲ್ಲಿ ತರಬೇತಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದು ಶಿರಸಿ ತೋಟಗಾರಿಕೆ ಕಾಲೇಜಿನ ವಿಜ್ಞಾನಿಗಳು ಆಗಮಿಸಿ ತಿಳಿವಳಿಕೆ ನೀಡಲಿದ್ದಾರೆ. ತಾಲೂಕಿನ ಎಲ್ಲಾ ಈರುಳ್ಳಿ ಬೆಳೆಗಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಮಾಗೋಪಾಯ: ವನ್ನಳ್ಳಿ ಸಮುದ್ರದಂಚು ಹಾಗೂ ಇತರ ಎಲ್ಲ ಗದ್ದೆಗಳಲ್ಲೂ ಹಾವು ಸುಳಿ ರೋಗ ಗಂಭೀರ ಸ್ವರೂಪದಲ್ಲಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೋಗಪೀಡಿತ ಗದ್ದೆಗಳಿಗೆ ಹೆಕ್ಸಾಕೊನೊಜೊಲಾ, ಹೆಕ್ಟ್ರಾಮುಂತಾದ ಔಷಧಗಳ ಸಿಂಪಡಣೆ, ಗೊಬ್ಬರಗಳಾದ ಪೊಟ್ಯಾಸಿಯಂ ನೈಟ್ರೇಟ್ ಇನ್ನಿತರ ಒಂದೆರಡು ಗೊಬ್ಬರಗಳ ಬಳಕೆಯಿಂದ ರೋಗ ಹಬ್ಬದಿರುವ ಸಸಿಗಳ ರಕ್ಷಣೆ ಮಾಡಬಹುದೆಂದು ತಿಳಿಸಿದ್ದಾರೆ. ಅಳ್ವೇಕೋಡಿ ಹಾಗೂ ಹಂದಿಗೋಣ ಭಾಗದಲ್ಲಿ ವಾರದ ಹಿಂದಷ್ಟೇ ಸಸಿ ನಾಟಿ ಮಾಡಿದ್ದಾರೆ. ಇನ್ನೊಂದು ತಿಂಗಳ ನಂತರ ಅಲ್ಲಿಯೂ ಈ ರೋಗದ ಅಪಾಯವಿದೆ.
ಪೂರ್ವಜರ ಕಾಲದಿಂದ ಜೀವನೋಪಾಯಕ್ಕಾಗಿ ಒಂದು ಬೆಳೆ ಭತ್ತ ಹಾಗೂ ಇನ್ನೊಂದು ಬೆಳೆ ಸಿಹಿ ಈರುಳ್ಳಿ ಬೆಳೆಯುತ್ತಾ ಬಂದಿದ್ದೇವೆ. ನಮ್ಮ ಭಾಗದಲ್ಲಿ ಈ ಬಾರಿ ಬಂದಷ್ಟು ದೊಡ್ಡ ಪ್ರಮಾಣದಲ್ಲಿ ಹಾವು ಸುಳಿರೋಗ ಹಿಂದೆ ಯಾವತ್ತೂ ಬಂದಿರಲಿಲ್ಲ. ವಿಪರೀತ ಮಳೆಯಿಂದ ಸಸಿ ನಾಟಿಗೂ ವಿಳಂಬವಾಗಿತ್ತು. ರೋಗಪೀಡಿತ ಸಸಿಗಳನ್ನು ಬಚಾವು ಮಾಡುವ ಯಾವ ಉಪಾಯವೂ ಉಳಿದಿಲ್ಲ.| ಸುರೇಶ ನಾಯ್ಕಬೆಳೆಗಾರವನ್ನಳ್ಳಿ ಭಾಗದಲ್ಲಿ ಈರುಳ್ಳಿ ಬೆಳೆ ಹಾವುಸುಳಿ ರೋಗ ವಿಪರೀತ ವ್ಯಾಪಿಸಿದೆ. ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಕೈಗೊಳ್ಳಬೇಕಾದ ಕ್ರಮ ಗಳನ್ನು ತಿಳಿಸಿದ್ದು ಉಳಿದ ಬೆಳೆಗಳ ನ್ನಾದರೂ ರಕ್ಷಿಸುವ ಉಪಾಯ ತಿಳಿಸಿದ್ದೇವೆ. ಕೆಲ ರೈತರು ಔಷಧ ಸಿಂಪಡಿಸಿ, ಗೊಬ್ಬರ ಬಳಸಿದ್ದರಿಂದ ರೋಗ ಹತೋಟಿಗೆ ಬರುತ್ತಿದೆ.| ಚೇತನ ನಾಯ್ಕ