ಗ್ರಾಮಸಭೆಯಲ್ಲಿ ಸಮಸ್ಯೆಗಳ ಚರ್ಚೆ

hengavalli
ಹೆಂಗವಳ್ಳಿಯಲ್ಲಿ ನಡೆದ 2024-25ನೇ ಸಾಲಿನ ಗ್ರಾಮಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
Published on

ವಿಜಯವಾಣಿ ಸುದ್ದಿಜಾಲ ಗೋಳಿಯಂಗಡಿ

ಹೆಂಗವಳ್ಳಿ ಗ್ರಾಮಕ್ಕೆ ಒಂದೇ ಸರ್ಕಾರಿ ಬಸ್ ಬರುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಹಾಗೂ ಕೂಲಿ ಕಾರ್ಮಿಕರ ಅನುಕೂಲಕ್ಕಾಗಿ ಹೆಚ್ಚಿನ ಸರ್ಕಾರಿ ಬಸ್ ಸಂಚಾರ ನಡೆಸಬೇಕು ಎಂದು ಹೆಂಗವಳ್ಳಿ ಗ್ರಾಮಸ್ಥರು ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ ಅವರನ್ನು ಒತ್ತಾಯಿಸಿದ್ದಾರೆ.

ಹೆಂಗವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆದ 2024-25ನೇ ಸಾಲಿನ ಗ್ರಾಮ ಪಂಚಾಯಿತಿಯ ಪ್ರಥಮ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಈ ಕುರಿತು ಶಾಸಕರಿಗೆ ಮನವಿ ಸಲ್ಲಿಸಿದ್ದು, ಬಸ್ ಕೊರತೆ ಬಗ್ಗೆ ಮನವರಿಕೆ ಮಾಡಿದರು. ಈ ಸಂದರ್ಭ ಶಾಸಕ ಕಿರಣ್‌ಕುಮಾರ್ ಮನವಿಗೆ ಸ್ಪಂದಿಸುವ ಭರವಸೆ ನೀಡಿದ್ದು, ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ತೋಟಗಾರಿಕಾ ಇಲಾಖೆ ಮಧುಕರ್ ನೋಡಲ್ ಅಧಿಕಾರಿಯಾಗಿದ್ದರು. ಹೆಂಗವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮ್ಯಾ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ಯೋಗೀಶ ಮಡಿವಾಳ, ಸದಸ್ಯರಾದ ಸಂತೋಷ್‌ಕುಮಾರ ಶೆಟ್ಟಿ, ಟಿ.ರಘರಾಮ ಶೆಟ್ಟಿ, ವಸುಂಧರಾ ಹೆಗ್ಡೆ, ಶೈಲಜಾ ಚಂದ್ರಕಾಂತ, ಗಿರಿಜಾ ಕುಲಾಲ, ಪಾರ್ವತಿ ಬಾ, ರತ್ನಾವತಿ ಪೂಜಾರಿ, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಪಿಡಿಒ ಮಧುಸೂದನ್ ಪ್ರಸಾದ್ ಸ್ವಾಗತಿಸಿದರು. ಯೋಗೇಶ್ ಮಡಿವಾಳ ವಂದಿಸಿದರು. ಹೆಂಗವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.

ಅಸಮಾಧಾನ

ಹೆಂಗವಳ್ಳಿ ಗ್ರಾಮಸ್ಥರು ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಯ ಹಣ ಬಾರದೆ ಇರುವ ಬಗ್ಗೆ ಇಲಾಖೆಯ ಅಧಿಕಾರಿಗಳ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು. ಶಾಸಕರು ಗ್ರಾಮಸ್ಥರ ಅಹವಾಲು ಆಲಿಸಿದರು. ಹೆಂಗವಳ್ಳಿ ಗ್ರಾಮಕ್ಕೆ ಹೆಚ್ಚಿನ ಸರ್ಕಾರಿ ಬಸ್ ಸಹಿತ ವಿವಿಧ ವ್ಯಸ್ಥೆಗಳನ್ನು ಕಲ್ಪಿಸಿಕೊಡುವುದಾಗಿ ಹೇಳಿದರು. ಗ್ರಾಮಸ್ಥರ ಇತರ ಅಹವಾಲುಗಳಿಗೆ ಸಂಬಂಧಿತ ಇಲಾಖೆ ಜತೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.

ಸಾಧಕರಿಗೆ ಸನ್ಮಾನ

ಶ್ರೇಷ್ಠ ವೈದ್ಯ ಪ್ರಶಸ್ತಿ ಪುರಸ್ಕೃತ ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೇಶ್ವರಿ ಎ.ಜೆ, ಡಾ.ಅನಂತಕೃಷ್ಣ ಅಡಿಗ ಹೆಂಗವಳ್ಳಿ, ಉತ್ತಮ ಕೃತಕ ಗರ್ಭಧಾರಣಾ ಕಾರ್ಯಕರ್ತ ಪ್ರಶಸ್ತಿ ಪುರಸ್ಕೃತ ತೊಂಬತ್ತು ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಾಹರ್ಣಾಧಿಕಾರಿ ರಾಜೀವ ಪೂಜಾರಿ, ಸಾಧಕರಾದ ಸೀತಾರಾಮ ಶೆಟ್ಟಿ ಚಾವುಡಿಮನೆ, ಹೆಂಗವಳ್ಳಿ ಶೌರ್ಯ ತಂಡದವನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net