ಆಧಾರ್ ಸೇವಾ ಕೇಂದ್ರದಲ್ಲಿ ತಾರತಮ್ಯ

Published on

ಉಪ್ಪಿನಂಗಡಿ: ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಧಾರ್ ಕಾರ್ಡ್ ಸೇವಾ ಕೇಂದ್ರದಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಮಾತಿನ ಚಕಮಕಿ ನಡೆದು ಪೊಲೀಸರಿಗೆ ದೂರು ನೀಡಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಇಲ್ಲಿನ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಆಧಾರ್‌ಕಾರ್ಡ್ ಸೇವಾ ಕೇಂದ್ರ ಕಾರ್ಯಾಚರಿಸುತ್ತಿದ್ದು, ಸೇವೆ ಬಯಸಿ ಬರುವ ಜನರ ಸಂಖ್ಯೆ ಹೆಚ್ಚಿದ್ದ ಕಾರಣಕ್ಕೆ ಟೋಕನ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಟೋಕನ್ ನೀಡಿದ ಬಳಿಕವೂ ಸೇವೆಯಲ್ಲಿ ತಾರತಮ್ಯವೆಸಗಲಾಗುತ್ತಿದೆ ಎಂದು ಆರೋಪಿಸಿದ ಆದಂ ಕೊಪ್ಪಳ ಎಂಬುವರು ದುಪ್ಪಟ್ಟು ಹಣ ನೀಡುವವರಿಗೆ ತ್ವರಿತ ಸೇವೆ ನೀಡಿ ಉಳಿದವರನ್ನು ಅನಗತ್ಯ ಸತಾಯಿಸಲಾಗುತ್ತಿದೆ ಎಂದು ಆಕ್ಷೇಪವೆತ್ತಿದ್ದರು. ಇದು ಮಾತಿನ ಚಕಮಕಿಗೆ ಕಾರಣವಾಗಿ ಪೊಲೀಸ್ ಇಲಾಖೆಗೆ ದೂರು ಸಲ್ಲಿಸುವವರೆಗೆ ತಲುಪಿತ್ತು. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಆಧಾರ್ ಸೇವೆಯ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಯಿಸಿ ನಿಯಮಾನುಸಾರ ಸೇವೆ ಸಲ್ಲಿಸಬೇಕೆಂದು ತಾಕೀತು ಮಾಡಿ ಪ್ರಕರಣ ಸುಖಾಂತ್ಯಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net