

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು
ಎಂಟು ಗಂಟೆಯಾದರೂ ಮಲಗಿದ್ದ ವಿದ್ಯಾರ್ಥಿಗಳು, ಎಲ್ಲೆಂದರೆಲ್ಲಿ ಬಿಸಾಡಿದ್ದ ಬಟ್ಟೆ ಹಾಗೂ ಪುಸ್ತಕಗಳು!. ಇದು
ತಹಸೀಲ್ದಾರ್ ಮಹೇಶ್ ಎಸ್.ಪತ್ರಿ ಅವರು ಮಂಗಳವಾರ ಬೆಳ್ಳಂಬೆಳಗ್ಗೆ ನಗರದ ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದಾಗ ಕಂಡು ಬಂದ ದೃಶ್ಯಗಳಿವು.
ನಾನು ಕೂಡ ಸರ್ಕಾರಿ ವ್ಯವಸ್ಥೆಯಲ್ಲಿ ಓದಿ ಬೆಳೆದವನು ಎಂದು ವಿದ್ಯಾರ್ಥಿಗಳಿಗೆ ಶಿಸ್ತಿನ ಪಾಠ ಬೋಧಿಸಿದರು. ವಿದ್ಯಾರ್ಥಿ ನಿಲಯದಲ್ಲಿ ಊಟ ಉಪಹಾರ, ಮಲಗಲು ವ್ಯವಸ್ಥೆಯೊಂದಿಗೆ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವನ್ನು ಸರ್ಕಾರ ಕಲ್ಪಿಸಿಕೊಟ್ಟಿದೆ. ನೀವು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪಾಲಕರ ಆಶೋತ್ತರಗಳಿಗೆ ಸ್ಪಂದಿಸಿ ಗೌರವಿಸಬೇಕು. ವಿದ್ಯಾರ್ಥಿ ಜೀವನ ಮಹತ್ವದ ಘಟ್ಟ. ಸುಮ್ಮನೆ ಸಮಯ ಹಾಳು ಮಾಡಬೇಡಿ. ಮೊಬೈಲ್ ಬಳಕೆ ಕಡಿಮೆ ಮಾಡಿ. ಅಧ್ಯಯನಕ್ಕೆ ಆದ್ಯತೆ ನೀಡಿ ಎಂದು ತಿಳಿ ಹೇಳಿದರು.
ಮುಂಜಾನೆ ಎದ್ದು ವ್ಯಾಯಾಮ, ಆಟೋಟಗಳ ಕಡೆಗೆ ಗಮನ ಕೊಡಿ. ಪುಸ್ತಕಗಳ ಜತೆಗೆ ದಿನಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ. ನಿಮಗೆ ಯಾವುದೇ ಸಮಸ್ಯೆ ಇದ್ದರೆ ಗಮನಕ್ಕೆ ತಂದರೆ ನಿವಾರಿಸಲಾಗುವುದು ಎಂದರು.
ಒಂದು ಗಂಟೆಗೂ ಹೆಚ್ಚು ಕಾಲ ವಿದ್ಯಾರ್ಥಿಗಳ ಜತೆ ಚರ್ಚಿಸಿ ನಿಲಯದಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ತಹಸೀಲ್ದಾರ್, ಜಿಲ್ಲಾ ನಿರ್ಮಿತಿ ಕೇಂದ್ರದಿಂದ ವಸತಿ ನಿಲಯದಲ್ಲಿ ನಡೆಯುತ್ತಿರುವ ದುರಸ್ತಿ ಕಾಮಗಾರಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.