

ತಿ.ನರಸೀಪುರ: ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ, ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡದೆ ಸಕಾಲದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ನೆಪಹೇಳಿ ಜನರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಲೋಕಾಯುಕ್ತ ಡಿವೈಎಸ್‌ಪಿ ವೆಂಕಟೇಶ್ ಎಚ್ಚರಿಸಿದರು.
ಪಟ್ಟಣದ ಗುರುಭವನದಲ್ಲಿ ಶುಕ್ರವಾರ ಲೋಕಾಯುಕ್ತ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಾರ್ವಜನಿಕರ ಕುಂದು ಕೊರತೆ ಸಭೆಯನ್ನು ನಡೆಸಿ, ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ ಮಾತನಾಡಿದರು.
ನಿಗದಿತ ಸಮಯಕ್ಕೆ ಸರಿಯಾಗಿ ಕರ್ತವ್ಯದ ಹಾಜರಾತಿ ಕಡ್ಡಾಯವಾಗಿರಬೇಕು. ಕೆಲಸದ ನಿಮಿತ್ತ ಕಚೇರಿಯಿಂದ ಹೊರ ಹೋಗುವ ಅಧಿಕಾರಿಗಳು ಚಲನವಹಿಯಲ್ಲಿ ಕಡ್ಡಾಯವಾಗಿ ಬರೆಯಬೇಕು. ಕ್ಯಾಶ್ ಬುಕ್ ನಿರ್ವಹಣೆ ಮಾಡುವುದರ ಜತೆಗೆ ಲೋಕಾಯುಕ್ತರ ವಿಳಾಸ ಮತ್ತು ಎಸ್‌ಪಿ, ಡಿವೈಎಸ್ಪಿ, ಹಾಗೂ ಇನ್‌ಸ್ಪೆಕ್ಟರ್ ದೂರವಾಣಿ ಅಥವಾ ಮೊಬೈಲ್ ಸಂಖ್ಯೆಗಳಿರುವ ನಾಮಫಲಕವನ್ನು ಕಡ್ಡಾಯವಾಗಿ ಹಾಕಿರಬೇಕು ಎಂದು ಸೂಚಿಸಿದರು.
ಪುರಸಭೆ ಸದಸ್ಯ ಮದನ್ ರಾಜ್ ಮಾತನಾಡಿ, ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುವ ಕಡು ಬಡವ ವ್ಯಾಪಾರಿಗಳು ಸಾಲ ಮಾಡುತ್ತಿದ್ದಾರೆ. ಈ ರಸ್ತೆ ಬದಿ ವ್ಯಾಪಾರ ಕೇವಲ ನರಸೀಪುರದಲ್ಲಿ ಮಾತ್ರ ಸೀಮಿತವಾಗಿಲ್ಲ. ಇಡೀ ದೇಶದಲ್ಲಿ ನಡೆಯುತ್ತಿದೆಯಾದರೂ ಪೊಲೀಸರು ರಸ್ತೆ ಬದಿ ವ್ಯಾಪಾರಿಗಳಿಗೆ ತುಂಬ ತೊಂದರೆ ಕೊಡುತ್ತಿರುವುದಲ್ಲದೆ ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ ಎಂದು ಲೋಕಾಯುಕ್ತರಿಗೆ ದೂರಿದರು. ಇದಕ್ಕೆ ಆರ್.ಮಣಿಕಂಠರಾಜಗೌಡ ಧ್ವನಿಗೂಡಿಸಿದರು.
ಸಾರ್ವಜನಿಕರಿಂದ ಲೋಕಾಯುಕ್ತರಿಗೆ ಒಟ್ಟು 21 ಅರ್ಜಿಗಳು ಬಂದಿದ್ದು, ಇದರಲ್ಲಿ ಬಹುತೇಕ ಕಂದಾಯ ಇಲಾಖೆ ಪಂಚಾಯತ್ ರಾಜ್ಯ ಇಲಾಖೆಗಳದೇ ಹೆಚ್ಚು ದೂರುಗಳಿವೆ. ಇದನ್ನು ಪರಿಶೀಲಿಸಿ ನಂತರ ಮಾತನಾಡಿದ ಡಿವೈಎಸ್‌ಪಿ ವೆಂಕಟೇಶ್, ನಮ್ಮ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು ಮತ್ತು ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದು ನಮ್ಮ ಕರ್ತವ್ಯ ಆದರಿಂದ ದೂರುದಾರರು ಯಾವುದೇ ಅನುಮಾನ ಪಡುವುದು ಬೇಡ ಎಂದರು.
ಲೋಕಾಯುಕ್ತ ಇನ್‌ಸ್ಪೆಕ್ಟರ್ ಉಮೇಶ್, ತಹಸೀಲ್ದಾರ್ ಸುರೇಶಾಚಾರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಅನಂತರಾಜು, ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ, ಪುರಸಭೆ ಮುಖ್ಯಾಧಿಕಾರಿ ಬಿ.ಕೆ.ವಸಂತಕುಮಾರಿ, ಟಿಪಿಒ ರಂಗಸ್ವಾಮಿ, ಎಇಇಗಳಾದ ಸತೀಶ್ ಚಂದ್ರನ್, ಪಿ.ಎನ್. ಚರಿತ, ಕೆ.ವಿ.ವೀರೇಶ್, ಕೆ.ಶಿವರಾಜು, ಸಹಾಯಕ ನಿರ್ದೇಶಕರಾದ ಎಂ.ರಾಜಣ್ಣ, ಶಾಂತ, ಶ್ವೇತಾ, ಶಶಿಕುಮಾರ್, ಪುಟ್ಟಸ್ವಾಮಿ, ಸಿಡಿಪಿಒ ಗೋವಿಂದರಾಜು, ಪಂಚಲಿಂಗಪ್ಪ, ಬಿಇಒ ಶಿವಮೂರ್ತಿ, ಅರಣ್ಯ ಇಲಾಖೆ ಅಧಿಕಾರಿ ರಾಜೇಶ್, ಪಿಡಿಒಗಳಾದ ಲಿಂಗರಾಜು, ಮಹೇಶ್, ಕೆಂಪೇಗೌಡ, ಚಿದಾನಂದ, ಪುಟ್ಟಸ್ವಾಮಿ, ಸಬ್‌ಇನ್‌ಸ್ಪೆಕ್ಟರ್ ಪಚ್ಚೇಗೌಡ, ಎಸ್‌ಪಿ ಡ್ಯೂಟಿ ಶಂಕರ್ ಹಾಗೂ ಇತರರು ಇದ್ದರು.