ಸಮಸ್ಯೆ ಬಗೆಹರಿಯದಿದ್ದರೆ ಶಿಸ್ತು ಕ್ರಮ

ಸಮಸ್ಯೆ ಬಗೆಹರಿಯದಿದ್ದರೆ ಶಿಸ್ತು ಕ್ರಮ
Published on

ಹನೂರು: ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿಗೃಹದ ಸಭಾಂಗಣದಲ್ಲಿ ಬುಧವಾರ ಲೋಕಾಯುಕ್ತ ಇನ್ಸ್‌ಪೆಕ್ಟರ್ ಲೋಹಿತ್‌ಕುಮಾರ್ ಸಾರ್ವಜನಿಕರಿಂದ ದೂರು ಅರ್ಜಿ ಸ್ವೀಕರಿಸಿದರು.

ಈ ವೇಳೆ ಮಂಗಲ ಗ್ರಾಮದ ವಿಶ್ವೇಶ್ವರ್ ಪ್ರಸಾದ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸೆಸ್‌ಮೆಂಟ್ ನಂಬರ್ 14 ರಲ್ಲಿ 30*150 ಅಡಿ ಅಳತೆಯ ಗೋ ಶಾಲೆ ಜಾಗವನ್ನು ಕೆಲ ವ್ಯಕ್ತಿಗಳು ಅಕ್ರಮಿಸಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ 2ವರ್ಷ ಕಳೆದಿದೆ. ಈ ಬಗ್ಗೆ ಪಿಡಿಒ ದೊರೆಯಾ ನಿರ್ಲಕ್ಷೃ ವಹಿಸಿದ್ದಾರೆ. ಜತೆಗೆ ಹುಲ್ಲೇಪುರ ಸರ್ವೆ ನಂ. 726/3ಎ, 726/2, 726/1ಬಿ ಹಾಗೂ 13/2ರಲ್ಲಿ ದೊರೆಸ್ವಾಮಿ ಎಂಬವರು 10.50 ಎಕರೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಸರ್ಕಾರಿ ಆಸ್ತಿಯನ್ನು ವಶಕ್ಕೆ ಪಡೆಯುವಂತೆ ಮನವಿ ಮಾಡಿದರು.

ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಲೋಹಿತ್ ಕುಮಾರ್ ಕೂಡಲೇ ಜಾಗವನ್ನು ಅಳತೆ ಮಾಡಿ ಸೂಕ್ತ ಕ್ರಮವಹಿಸಬೇಕು. ಈ ಬಗ್ಗೆ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಲೊಕ್ಕನಹಳ್ಳಿ ಗ್ರಾಮದ ಬಸವಣ್ಣ ಮಾತನಾಡಿ, 2019-20ನೇ ಸಾಲಿನಲ್ಲಿ 3 ಚೆಕ್ ಡ್ಯಾಂ ಹಾಗೂ ಒಂದು ಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೆ, ಪಂಚಾಯಿತಿ ಅಧಿಕಾರಿಗಳು ಹಣವನ್ನು ಮಂಜೂರು ಮಾಡಲು ಸತಾಯಿಸುತ್ತಿದ್ದಾರೆ. ಇದರಿಂದ ತುಂಬಾ ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರೆ, 10ನೇ ವಾರ್ಡಿನ ಮಂಜೇಶ್ ಮಾತನಾಡಿ, ಬಡಾವಣೆಯಲ್ಲಿ ವ್ಯಕ್ತಿಯೊಬ್ಬರು ಚರಂಡಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಕೊಳಚೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ 2 ವರ್ಷದಿಂದಲೂ ಮನವಿ ಸಲ್ಲಿಸಲಾಗುತ್ತಿದ್ದು, ಪ.ಪಂ. ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ದೂರಿದರು.

ಈ ಬಗ್ಗೆ ಅಗತ್ಯ ಕ್ರಮಕೈಗೊಂಡು ಎರಡು ದಿನಗಳಲ್ಲಿ ಒತ್ತುವರಿ ತೆರವುಗೊಳಿಸಿ ವರದಿ ಸಲ್ಲಿಸಬೇಕು. ತಪ್ಪಿದಲ್ಲಿ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವುದಾಗಿ ಇನ್ಸ್‌ಪೆಕ್ಟರ್ ಪಪಂ ಪ್ರಭಾರ ಆರೋಗ್ಯ ನಿರೀಕ್ಷಕ ಮಾದೇಶ್ ಅವರಿಗೆ ಎಚ್ಚರಿಸಿದರು.

ವೆಂಕಟೇಗೌಡ ಎಂಬುವರು ಮಾತನಾಡಿ, ಪ.ಪಂ.ನಲ್ಲಿ ನೀರು ಗಂಟಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದೇನೆ. ಆದರೆ ಜೀವನ ಭತ್ಯೆ ಹಣ ಮಂಜೂರು ಮಾಡಲು ಪ.ಪಂ. ಅಧಿಕಾರಿಗಳು ಕಳೆದ ಒಂದೂವರೆ ವರ್ಷದಿಂದಲೂ ಸತಾಯಿಸುತ್ತಿದ್ದಾರೆ ಎಂದು ದೂರಿದರೆ, ಕೂಡಲೂರು ಗ್ರಾಮದ ವೆಂಕಟಾಚಲ ಮಾತನಾಡಿ, ಈ ಹಿಂದೆ ಮೈಸೂರಿನಿಂದ ತಮಿಳುನಾಡಿನ ಈರೋಡ್‌ಗೆ ಹನೂರು ಮಾರ್ಗವಾಗಿ ಸಾರಿಗೆ ಬಸ್ ಸಂಚರಿಸುತ್ತಿತ್ತು. ಆದರೆ, ಹಲವು ವರ್ಷಗಳಿಂದ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಜತೆಗೆ ಹೂಗ್ಯಂ ಗ್ರಾಪಂನಲ್ಲಿ ನರೇಗಾ ಯೋಜನೆಯಡಿಯ ಕಾಮಗಾರಿಯಲ್ಲಿ ಜನರಿಗೆ ಉದ್ಯೋಗ ನೀಡದೆ ಯಂತ್ರಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದರು.

ಸಮಸ್ಯೆಗಳನ್ನು ಆಲಿಸಿದ ಬಳಿಕ ಇನ್ಸ್‌ಪೆಕ್ಟರ್ ಲೋಹಿತ್‌ಕುಮಾರ್ ಮಾತನಾಡಿ, ಸಭೆಯಲ್ಲಿ ಸ್ವೀಕೃತವಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಕೂಡಲೇ ಕ್ರಮವಹಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು. ಸಮಸ್ಯೆ ಬಗೆಹರಿಯದಿದ್ದಲ್ಲಿ ಮುಂದಿನ ಕ್ರಮವಹಿಸುವುದಾಗಿ ಹೇಳಿದರು.

ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್, ಶಿರಸ್ತೆದಾರ್ ನಾಗೇಂದ್ರ, ಸೆಸ್ಕ್ ಎಇ ರಂಗಸ್ವಾಮಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಂ. ಮಹಾದೇವ, ಅಗ್ನಿಶಾಮಕ ಠಾಣಾಧಿಕಾರಿ ಪ್ರಶಾಂತ್ ನಾಯಕ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net