ಟ್ಯಾಂಕರ್‌ಗಳಿಗೆ ಸಹಾಯಕ ಚಾಲಕ ಕಡ್ಡಾಯ : ಪೆಟ್ರೋಲಿಯಂ ಕಂಪನಿಗಳಿಗೆ ಡಿಸಿ ಸೂಚನೆ

dc
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಪೆಟ್ರೋಲಿಯಂ ಉತ್ಪನ್ನ ಸಾಗಾಟದ ಟ್ಯಾಂಕರ್ ಲಾರಿಗಳು ಚಾಲಕನ ಜತೆಗೆ ಸಹಾಯಕ ಅಥವಾ ಸಹಚಾಲಕನನ್ನು ಹೊಂದಿರುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಾದ್ಯಂತ ಟ್ಯಾಂಕರ್ ಲಾರಿಗಳನ್ನೂ ಪೊಲೀಸರು ತಪಾಸಣೆ ನಡೆಸಲಿದ್ದಾರೆ. ಸಹಾಯಕ ಚಾಲಕ ರಹಿತ ಪೆಟ್ರೋಲಿಯಂ ಟ್ಯಾಂಕರ್ ಲಾರಿಗಳನ್ನು ತಡೆಹಿಡಿಯಲಾಗುತ್ತದೆ. ಅಗತ್ಯ ಸಮಯದಲ್ಲಿ ತ್ವರಿತ ಸೇವೆ ಒದಗಿಸುವ ನಿಟ್ಟಿನಲ್ಲಿ ತಲಪ್ಪಾಡಿಯಿಂದ ಕೇರಳ ಪೊಲೀಸರ ಪೈಲಟ್ ವಾಹನಗಳನ್ನು ನಿಯೋಜಿಸಲಾಗುವುದು. ತಲಪ್ಪಾಡಿವರೆಗೆ ಪೈಲಟ್ ವಾಹನ ಒದಗಿಸುವ ಬಗ್ಗೆ ದಕ್ಷಿಣ ಕನ್ನಡ ಉಪ ಆಯುಕ್ತರ ಸಹಕಾರ ಕೋರುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

24 ಗಂಟೆಯೂ ಕಾರ್ಯನಿರ್ವಹಿಸುವ ಅಲರ್ಟ್ ಕಂಟ್ರೋಲ್ ರೂಂ ವ್ಯವಸ್ಥೆ ಹೊಂದಿದ್ದು, ಅಗತ್ಯ ಬಿದ್ದರೆ ಅತಿ ಶೀಘ್ರದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸೌಲಭ್ಯಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ವಿವಿಧ ಪೆಟ್ರೋಲ್ ಕಂಪನಿಗಳ ಪ್ರತಿನಿಧಿಗಳು ತಿಳಿಸಿದ್ದಾರೆ.

ಪೆಟ್ರೋಲಿಯಂ ಕಂಪನಿ ಪ್ರತಿನಿಧಿಗಳಾದ ಜೆ.ವಿಜಯ್ ಸೂರ್ಯ, ವಿ.ಸುಭಜ್ಯೋತ್ಸ್ನಾ, ಶಿವರಾಜ್ ಸಿಂಗ್, ಪಿ.ಕೆ.ಪಟ್ನಾಯಕ್, ಪಿ.ರವಿಂದು, ಎಡಿಎಂ ಕೆ.ವಿ.ಶ್ರುತಿ, ಜಿಲ್ಲಾ ಅಗ್ನಿಶಾಮಕದಳ ಅಧಿಕಾರಿ ಬಿ. ರಾಜಾ, ಕೆಎಸ್‌ಪಿಸಿಬಿ ಕಾರ್ಯಪಾಲಕ ಎಂಜಿನಿಯರ್ ಜೆ. ಆರ್ಥರ್ ಕ್ಸೇವಿಯರ್, ನೀರಾವರಿ ಕಾರ್ಯಪಾಲಕ ಅಭಿಯಂತರ ಡಾ.ಪಿ.ಟಿ.ಸಂತೋಷ್ ಕುಮಾರ್, ಸಹಾಯಕ ಡಿ.ಎಂ.ಒ. ಕೆ. ಪಸಾದ್ ಹಜಾರ್ಡ್, ವಿಶ್ಲೇಷಕ ಅಶ್ವತಿಕೃಷ್ಣ ಮೊದಲಾದವರು ಭಾಗವಹಿಸಿದ್ದರು.

ರೋಗಗಳ ಬಗ್ಗೆ ನಿಗಾ

ಮಳೆಗಾಲದ ಕಾರಣದಿಂದ ಸಾರ್ವಜನಿಕವಾಗಿ ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಡೆಂಘೆ, ಹಳದಿ ಕಾಮಾಲೆಯಂತಹ ರೋಗಗಳ ವಿರುದ್ಧ ನಿಯಂತ್ರಣ ಅಗತ್ಯವಾಗಿದೆ. ಜಿಲ್ಲೆಯ ಎಲ್ಲ ಹೋಟೆಲ್‌ಗಳು, ಕೂಲ್‌ಬಾರ್‌ಗಳನ್ನು ಪರಿಶೀಲಿಸಿ ಪ್ರತಿದಿನ ಡಿಡಿಎಂಎಗೆ ವರದಿ ಸಲ್ಲಿಸುವಂತೆ ಆಹಾರ ಸುರಕ್ಷತಾ ಇಲಾಖೆ ಹಾಗೂ ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net