ನೆಟ್ಟ ಗಿಡಗಳ ಆರೈಕೆ - ಶಾಸಕ ಅಶೋಕ್ ರೈ ಕರೆ - ಕೆಮ್ಮಾಯಿಯಲ್ಲಿ ವನ ಮಹೋತ್ಸವ

PTR_24 JUN_4
Published on

ಪುತ್ತೂರು: ಮಳೆಗಾಲದಲ್ಲಿ ವನಮಹೋತ್ಸವ ಅಬ್ಬರದಿಂದ ಆಚರಿಸಿ ಬಳಿಕ ಗಿಡಗಳನ್ನು ನೋಡುವವರೇ ಇಲ್ಲದ ಸ್ಥಿತಿ ಎಂಬಂತಾಗುತ್ತದೆ. ನೆಟ್ಟ ಗಿಡಗಳನ್ನು ಆರೈಕೆ ಮಾಡುವ ಜವಾಬ್ದಾರಿ ನಮಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲ ರಸ್ತೆ ಬದಿಗಳಲ್ಲಿಯೂ ಗಿಡಗಳನ್ನು ನೆಡುವ ಜತೆಗೆ ಸೂಕ್ತ ರಕ್ಷಣೆಯ ಕೆಲಸವನ್ನು ಮಾಡಬೇಕು. ಕಾಟು ಮಾವು, ನೇರಳೆ ಸೇರಿದಂತೆ ಹೆಚ್ಚಿನ ಕಾಟು ಗಿಡಗಳು ವಿನಾಶದ ಅಂಚಿನಲ್ಲಿವೆ. ಅದನ್ನು ರಸ್ತೆ ಬದಿಯಲ್ಲಿ ನೆಡುವ ಕೆಲಸ ನಡೆಯುತ್ತಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಸೋಮವಾರ ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.


ಗಿಡ ನೆಟ್ಟು ಕಾರ್ಯಕ್ರಮ ಮಾಡಿ ಕೈ ತೊಳೆದುಕೊಂಡರೆ ಸಾಲದು. ನೆಟ್ಟ ಗಿಡ ಮರವಾಗುವ ತನಕ ಅದನ್ನು ಉಳಿಸುವ ಜವಾಬ್ದಾರಿ ಇಲಾಖೆ ಮತ್ತು ಸಾರ್ವಜನಿಕರಿಗಿದೆ. ರಸ್ತೆ ಬದಿ ನೆಟ್ಟ ಗಿಡ ನಮ್ಮ ಗಿಡ ಎಂಬ ಪ್ರೀತಿ ಸಾರ್ವಜನಿಕರಲ್ಲಿ ಮೂಡಬೇಕಿದೆ. ಸಾರ್ವಜನಿಕರು ನೆಟ್ಟ ಗಿಡವನ್ನು ಯಾವುದೇ ಕಾರಣಕ್ಕೂ ಕೀಳಬಾರದು. ಗಿಡಗಳು ಬೇಕಾದಲ್ಲಿ ಇಲಾಖೆಯವರು ತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ಡಿವೈಡರ್‌ಗಳ ಮಧ್ಯೆ ವಿವಿಧ ತರದ ಹೂವಿನ ಗಿಡಗಳನ್ನು ನೆಟ್ಟು ರಸ್ತೆಯನ್ನು ಸೌಂದರೀಕರಣ ಮಾಡಲಾಗುವುದು ಎಂದು ಹೇಳಿದರು.

ರೈ ಎಜುಕೇಶನಲ್ ಆಂಡ್ ಚಾರಿಟೆಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಮಾತನಾಡಿ, ಶಾಸಕರ ಗಿಡ ನೆಡುವ ಕಾರ್ಯಕ್ರಮಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ. ಗಿಡಕ್ಕೆ ಗೊಬ್ಬರ ಹಾಕುವ ಕಾರ್ಯಕ್ಕೆ ಇಂದು ಚಾಲನೆಯನ್ನು ನೀಡಿದ್ದೇವೆ. ರಸ್ತೆ ಬದಿಯಲ್ಲಿರುವ ಮರಗಳನ್ನು ರಸ್ತೆ ಅಭಿವೃದ್ಧಿ ಮಾಡುವ ಸಂದರ್ಭ ಕಡಿಯಲಾಗಿದೆ. ಆ ಜಾಗದಲ್ಲಿ ಮತ್ತೆ ಗಿಡ ಬೆಳೆಸುವ ಮೂಲಕ ಹಳೆಯ ವೈಭವ ಮರಳಬೇಕಿದೆ ಎಂದು ಹೇಳಿದರು.

ಪುತ್ತೂರು ಸಹಾಯಕ ಸಂರಕ್ಷಣಾಽಕಾರಿ ಸುಬ್ಬ ನಾಯ್ಕ, ಅರಣ್ಯಾಽಕಾರಿ ಕಿರಣ್ ಬಿ, ಸಾಮಾಜಿಕ ವಲಯ ಅರಣ್ಯಾಽಕಾರಿ ವಿದ್ಯಾರಾಣಿ, ಕೋಡಿಂಬಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್, ಕ್ಷೇತ್ರ ಶಿಕ್ಷಣಾಽಕಾರಿ ಲೋಕೇಶ್, ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆಯ ಸಿಬಂದಿ, ರೈ ಚಾರಿಟೆಬಲ್ ಟ್ರಸ್ಟ್ ಪದಾಽಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net