ಅಂಗವಿಕಲರ ಸೇವೆಯಿಂದ ಜೀವನ ಸಾರ್ಥಕ

FotoJet
Published on

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ಅನಿಸಿಕೆ ಶಾಲಾ ಮುಖ್ಯಸ್ಥರು, ಆಡಳಿತ ವ್ಯವಸ್ಥೆ ಅರಿವು ಕಾರ್ಯಾಗಾರಕ್ಕೆ ಚಾಲನೆ

ಶಿಡ್ಲಘಟ್ಟ: ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ದೈವತ್ವ ಅಡಗಿದ್ದು, ಅಂಗವಿಕಲ ಮಕ್ಕಳ ಸೇವೆ ಮೂಲಕ ಜೀವನವನ್ನು ಸಾರ್ಥಕಗೊಳಿಸಬೇಕು. ಅಂಗವಿಕಲರು ದೈವದತ್ತವಾಗಿ ಇರುವ ಕೌಶಲ ಹಾಗೂ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮುಂಚೂಣಿಗೆ ಬರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ಹೇಳಿದರು.

ನಗರದ ವಾಸವಿ ಕಲ್ಯಾಣಮಂಟಪದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮದೃಷ್ಟಿ ಕ್ಷಮತಾವಿಕಾಸ ಮತ್ತು ಅನುಸಂಧಾನಮಂಡಲ, ನವಜೀವನ ಸಂಸ್ಥೆ, ಗ್ರಾಮಾಂತರ ಟ್ರಸ್ಟ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ, ಎರಾ ಸಂಸ್ಥೆ, ರಾಯರಕಿರಣಗಳ ಸಂಯುಕ್ತ ಆಶ್ರಯದಲ್ಲಿ ಸಮನ್ವಯ ಶಿಕ್ಷಣದಡಿ ಹಮ್ಮಿಕೊಂಡಿದ್ದ ಶಾಲಾ ಮುಖ್ಯಸ್ಥರು, ಅಂಗವಿಕಲ ಮಕ್ಕಳ ಪಾಲಕರು, ಆಡಳಿತ ವ್ಯವಸ್ಥೆಯ ಅರಿವು ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಲಾಖೆಯು ಸಮನ್ವಯ ಶಿಕ್ಷಣದಡಿ ಅಂಗವಿಕಲರ ಶೈಕ್ಷಣಿಕ ಅಭಿವೃದ್ಧಿಗಾಗಿ ಸಾಕಷ್ಟು ಸವಲತ್ತು ಒದಗಿಸುತ್ತಿದ್ದು, ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಮನ್ವಯ ಶಿಕ್ಷಣದ ಅಗತ್ಯ ಇದೆ. ಮಕ್ಕಳಲ್ಲಿನ 21 ವಿವಿಧ ಬಗೆಯ ನ್ಯೂನತೆ ಗುರುತಿಸಿ ಸ್ಯಾಟ್ಸ್ ಮತ್ತು ಯುಡೈಸ್ ಪ್ಲಸ್‌ನಲ್ಲಿ ಅಪ್ ಡೇಟ್ ಮಾಡುವುದು, ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ಸಿಗಬಹುದಾದ ಸವಲತ್ತು ಮತ್ತು ಭತ್ಯೆ, ವೈದ್ಯಕೀಯ ಸವಲತ್ತು, ಯುಡಿಐಡಿ ಕಾರ್ಡ್ ಮಾಡಿಸುವ ಮಹತ್ವ ಮತ್ತು ವಿಧಾನ, ತಾಲೂಕು ಬಿಆರ್‌ಸಿ ಕೇಂದ್ರದಲ್ಲಿ ಲಭ್ಯಸಂಪನ್ಮೂಲಗಳ ಅರಿವು ಶಿಕ್ಷಕರಿಗೆ ಮತ್ತು ವಿಕಲಾಂಗ ಮಕ್ಕಳ ಪಾಲಕರಿಗೆ ಇರಬೇಕು ಎಂದರು

ಶಾಲೆಗಳಲ್ಲಿ ಅಂಗವಿಕಲರ ಅಗತ್ಯತೆಗಳ ಮ್ಯಾಪಿಂಗ್ ಮಾಡಿ ರ‌್ಯಾಂಪ್, ರೈಲಿಂಗ್ಸ್ ಅಳವಡಿಕೆ, ಶೌಚಗೃಹದ ವಿಶೇಷ ಕ್ರಮ, ಶ್ರವಣದೋಷವುಳ್ಳವರಿಗೆ ಅಗತ್ಯ ವ್ಯವಸ್ಥೆ, ಸಮಾನ ಶಿಕ್ಷಣ ಒದಗಿಸುವುದು. ಶಿಕ್ಷಕರು ಮತ್ತು ಸಹಪಾಠಿಗಳು ವರ್ತಿಸಬೇಕಾದ ರೀತಿಗಳು, ವಿಶೇಷದಿನಗಳ ಆಚರಣೆ, ನ್ಯೂನತೆಯುಳ್ಳ ಮಕ್ಕಳ ಅಭಿವೃದ್ಧಿಗಾಗಿ ಆಪ್ತ ಗೆಳೆಯ ಬಡ್ತಿ ಸಿಸ್ಟಂ ಜಾರಿಯಂತಹ ಅನೇಕ ಅಂಶಗಳನ್ನು ಶಿಕ್ಷಕರು ಅರಿತಿರಬೇಕು ಎಂದರು.

ಸಮದೃಷ್ಟಿ ಕ್ಷಮತಾ ವಿಕಾಸ ಮತ್ತು ಅನುಸಂಧಾನ ಮಂಡಲ ಕರ್ನಾಟಕ ಪ್ರಾಂತ ಅಧ್ಯಕ್ಷ ಕೇಶವಮೂರ್ತಿ, ಬಿ.ಆರ್.ಸಿ ನಮನ್ವಯಾಧಿಕಾರಿ ಲಕ್ಷ್ಮಿನಾರಾಯಣ್ ಮಾತನಾಡಿದರು.

ಸವಲತ್ತು ವಿತರಣೆ

ಅಂಗವಿಕಲ ಮಕ್ಕಳು ಪ್ರದರ್ಶಿಸಿದ ರಾಷ್ಟ್ರಭಕ್ತಿ ತೋರುವ ನೃತ್ಯ ಎಲ್ಲರ ಗಮನಸೆಳೆಯಿತು. 21 ಅಂಗವೈಕಲ್ಯ ವಿಧಗಳು, ಸರ್ಕಾರಿ ಸೌಲಭ್ಯಗಳ ಸಚಿತ್ರ ಕಾರ್ಡು ಬಿಡುಗಡೆಗೊಳಿಸಲಾಯಿತು. ನವಜೀವನಸಂಸ್ಥೆಯ ಅಧ್ಯಕ್ಷ ಬೆಳ್ಳೂಟಿ ಮುನಿರಾಜು ಅವರನ್ನು ಸನ್ಮಾನಿಸಲಾಯಿತು. ಹಲವರಿಗೆ ವಿವಿಧ ಸವಲತ್ತು ವಿತರಿಸಲಾಯಿತು.

ಬಿಆರ್‌ಸಿ ಕೇಂದ್ರದ ಬಿ.ಎಂ.ಜಗದೀಶ್, ರಾಧಾ, ಚೀಮಂಗಲ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಶಿವಶಂಕರ್, ನವಜೀವನ ಸಂಸ್ಥೆಯ ಅಧ್ಯಕ್ಷ ಬೆಳ್ಳೂಟಿ ಮುನಿರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಆರ್.ನಾರಾಯಣಸ್ವಾಮಿ, ಕಾರ್ಯದರ್ಶಿ ಕೆಂಪೇಗೌಡ, ಬಿಆರ್‌ಪಿಗಳಾದ ಕೆ.ಮಂಜುನಾಥ್, ಚಂದ್ರಕಲಾ, ವೇಣುಮಾಧವಿ, ಸಿಆರ್‌ಪಿ ರಮೇಶ್‌ಕುಮಾರ್, ಎರಾ ಸಂಸ್ಥೆಯ ಥೆರಪಿಸ್ಟ್ ಪುಷ್ಪಲತಾ, ಕ್ಲಿನಿಕಲ್ ಸೈಕಲಾಜಿಸ್ಟ್ ವಿಜಯಾ, ಫಿಜಿಯೋಥೆರಪಿಸ್ಟ್ ವಿಜ್ನೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಂಗವಿಕಲರ ಪುನರ್ವಸತಿಕೇಂದ್ರದ ನೋಡಲ್ ಅಧಿಕಾರಿ ಸುನಿಲ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಕ್ಷಮ ಅಧ್ಯಕ್ಷ ಹಾರೋಹಳ್ಳಿ ಚಂದ್ರಪ್ಪ, ಚಿಕ್ಕಬಳ್ಳಾಪುರ ಡಿಡಿಆರ್‌ಸಿಯ ಮೋಹನ್, ವಾಸವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರೂಪಸಿ ರಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net