

ರಾಘವೇಂದ್ರ ಪೈ ಗಂಗೊಳ್ಳಿ
ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವಠಾರದಲ್ಲಿ ಸುಸಜ್ಜಿತ ವ್ಯವಸ್ಥೆಗಳಿರುವ ಪೋಸ್ಟ್‌ಮಾರ್ಟಂ ಕಟ್ಟಡ ನಿರ್ಮಾಣಗೊಂಡು ವರ್ಷಗಳೇ ಉರುಳಿದರೂ ಮರಣೋತ್ತರ ಪರೀಕ್ಷೆಗೆ ಕುಂದಾಪುರಕ್ಕೆ ತೆರಳಬೇಕಾದ ಅನಿವಾರ್ಯತೆ ಇದೆ.
ಗಂಗೊಳ್ಳಿಯು ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರು ಪ್ರದೇಶವಾಗಿದ್ದು, ನಿತ್ಯವೂ ಒಂದಿಲ್ಲೊಂದು ಅವಘಡಗಳು ಇಲ್ಲಿ ಮಾಮೂಲಾಗಿವೆ. ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುವ ಬೇಡಿಕೆ ಒಂದೆಡೆಯಾದರೆ, ಮರಣೋತ್ತರ ಪರೀಕ್ಷೆ ಗಂಗೊಳ್ಳಿಯಲ್ಲೇ ಮಾಡಬೇಕು. ಇದಕ್ಕೆ ಸಿಬ್ಬಂದಿ ಹಾಗೂ ಸೌಲಭ್ಯ ನೀಡಬೇಕೆಂಬ ಕೂಗು ಇನ್ನೊಂದಡೆಯಿಂದ ಕೇಳಿಬರುತ್ತಿದೆ.
ರಸ್ತೆ ಅಪಘಾತ ಅಥವಾ ಇನ್ನಿತರ ಯಾವುದೇ ಸಾವುಗಳು ಸಂಭವಿಸಿದಾಗ ಮರಣೋತ್ತರ ಪರೀಕ್ಷೆಗೆಂದು ಗಂಗೊಳ್ಳಿಯ ಜನರು ಕುಂದಾಪುರ ಮತ್ತಿತರ ಕಡೆಗಳಿಗೆ ಹೋಗಬೇಕಿದೆ. ಸಮಯ ವ್ಯರ್ಥವಾಗುವುದರ ಜತೆಗೆ ಆಂಬುಲೆನ್ಸ್ ಸಹಿತ ಮತ್ತಿತರ ವೆಚ್ಚಗಳು ದುಬಾರಿಯಾಗುತ್ತಿವೆ. ಕಾಯಂ ವೈದ್ಯರ ಸೌಕರ್ಯಗಳಿದ್ದರೂ ಗ್ರೂಪ್ ಡಿ (ಪುರುಷ) ನೌಕರರ ಕೊರತೆಯಿಂದ ಇಲ್ಲೇ ಪೋಸ್ಟ್‌ಮಾರ್ಟಂ ಅಸಾಧ್ಯವಾಗುತ್ತಿದೆ.
ಸಿಬ್ಬಂದಿ ನೇಮಿಸಿ: ಜನಪ್ರತಿನಿಧಿಗಳು, ಇಲಾಖೆಯ ಹಿರಿಯ ಅಧಿಕಾರಿಗಳು ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದತ್ತ ಗಮನ ಹರಿಸಬೇಕಿದ್ದು, ಅಗತ್ಯ ಸಿಬ್ಬಂದಿ ಸಹಿತ ಮೂಲಸೌಕರ್ಯಗಳ ಒದಗಿಸಬೇಕು. ಗಂಗೊಳ್ಳಿಯಲ್ಲೇ ಪೋಸ್ಟ್‌ಮಾರ್ಟಂ ನಡೆಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
2015-16ರಲ್ಲಿ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊಸ ಕಟ್ಟಡ ನಿರ್ಮಾಣ ಸಂದರ್ಭ 6 ಲಕ್ಷ ರೂ. ವೆಚ್ಚದಲ್ಲಿ ಪೋಸ್ಟ್ ಮಾರ್ಟಂ ಕಟ್ಟಡ ನಿರ್ಮಿಸಲಾಗಿತ್ತು. ಅಲ್ಲಿ ಇದುವರೆಗೆ ಕೇವಲ ಎರಡು ಪೋಸ್ಟ್ ಮಾರ್ಟಂ ನಡೆಸಲಾಗಿದೆ. ಎಂಟು ವರ್ಷಗಳಿಂದ ಕಟ್ಟಡ ಪಾಳು ಬಿದ್ದಂತಾಗಿದ್ದು, ಶೀಘ್ರವೇ ಈ ಕಟ್ಟಡದಲ್ಲಿ ಸಕಲ ವ್ಯವಸ್ಥೆಗಳನ್ನು ಕಲ್ಪಿಸಿ ಕಾರ್ಯಾರಂಭಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಗಂಗೊಳ್ಳಿಯಲ್ಲಿ ಪೋಸ್ಟ್‌ಮಾರ್ಟಂಗೆ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದರೂ ಪೋಸ್ಟ್‌ಮಾರ್ಟಂ ಮಾಡಲು ಕುಂದಾಪುರ ಮತ್ತಿತರ ಕಡೆಗಳಿಗೆ ಹೋಗಬೇಕಾಗಿದೆ. ಗ್ರೂಪ್ ಡಿ ನೌಕರರ ಕೊರತೆಯಿಂದ ಮರಣೋತ್ತರ ಪರೀಕ್ಷೆ ಮಾಡಲಾಗದ ಪರಿಸ್ಥಿತಿ ಇದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಗಂಗೊಳ್ಳಿಯಲ್ಲೇ ಪೋಸ್ಟ್‌ಮಾರ್ಟಂ ಮಾಡಲು ಕ್ರಮಕೈಗೊಳ್ಳಬೇಕಿದೆ -ನವೀನ್ ಗಂಗೊಳ್ಳಿ, ಸಾಮಾಜಿಕ ಹೋರಾಟಗಾರ ಗಂಗೊಳ್ಳಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಗ್ರೂಪ್ ಡಿ (ಪುರುಷ) ನೌಕರರ ಕೊರತೆ ಇದೆ.ಆರೋಗ್ಯ ಕೇಂದ್ರದಲ್ಲಿ ಪೋಸ್ಟ್ ಮಾರ್ಟಂಗೆ ಅನನುಕೂಲವಾಗುತ್ತಿದ್ದು, ಕುಂದಾಪುರ ಆಸ್ಪತ್ರೆಯ ಅವಲಂಬನೆ ಅನಿವಾರ್ಯವಾಗಿದೆ. -ಡಾ.ಪ್ರೇಮಾನಂದ, ತಾಲೂಕು ಆರೋಗ್ಯಾಧಿಕಾರಿ, ಕುಂದಾಪುರ
*ಸುಸಜ್ಜಿತ ಕಟ್ಟಡವಿದ್ದರೂ ಸಿಬ್ಬಂದಿ ಕೊರತೆ * ಮರಣೋತ್ತರ ಪರೀಕ್ಷೆಗೆ ಕುಂದಾಪುರಕ್ಕೆ ಹೋಗುವ ಅನಿವಾರ್ಯತೆ * ಗಂಗೊಳ್ಳಿಯಲ್ಲೇ ಪೋಸ್ಟ್‌ಮಾರ್ಟಂ ನಡೆಸಲು ಒತ್ತಾಯ