ನರೇಂದ್ರ ಎಸ್.ಮರಸಣಿಗೆ

ಪ್ರಸಕ್ತ ವರ್ಷ ಆಗಾಗ ಸುರಿದ ಮಳೆಯಿಂದಾಗಿ ಹೆಬ್ರಿಯ ಪ್ರಮುಖ ನೀರು ಸರಬರಾಜು ಕೇಂದ್ರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಿಂಡಿ ಅಣೆಕಟ್ಟಿನಲ್ಲಿ ನೀರು ತುಂಬಿ ಹರಿಯುತ್ತಿದೆ. ಹಾಗಾಗಿ ಈ ಬಾರಿ ಬಿರುಬೇಸಿಗೆಯಲ್ಲೂ ಹೆಬ್ರಿ ತಾಲೂಕಿನಲ್ಲಿ ಕುಡಿಯುವ ನೀರಿನ ಕೊರತೆ ಕಾಡುತ್ತಿಲ್ಲ.
ತಾಲೂಕಿನ ಚಾರ, ಹೆಬ್ರಿ, ಶಿವಪುರ, ಕುಚ್ಚೂರು ಗ್ರಾಮದ ಸಾವಿರಾರು ಜನರಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಿಂದಾಗಿ ಕುಡಿಯುವ ನೀರು ಲಭ್ಯವಾಗಿದೆ. ಕಳೆದೆರಡು ವರ್ಷಗಳ ಹಿಂದೆ ಏಪ್ರಿಲ್, ಮೇ ತಿಂಗಳಲ್ಲಿ ಬತ್ತಿ ಹೋಗಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಿಂಡಿ ಅಣಿಕಟ್ಟು ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ತುಂಬಿದೆ. ಇದರಿಂದಾಗಿ ಹೆಬ್ರಿಗೆ ಸದ್ಯಕ್ಕಂತೂ ನೀರಿನ ಸಮಸ್ಯೆ ಇರುವುದಿಲ್ಲ.
ಯಥೇಚ್ಛ ನೀರು ಶೇಖರಣೆ
ಚಾರ ನವೋದಯದ ಬಳಿ ಸುಮಾರು 70 ಕೋಟಿ ರೂ.ವೆಚ್ಚದಲ್ಲಿ ಸೀತಾ ನದಿಗೆ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣವಾಗಿರುವುದು ಕೂಡ ಇಲ್ಲಿನ ನೀರು ಹೆಚ್ಚಾಗಲು ಪ್ರಮುಖ ಕಾರಣ. ಇದರಲ್ಲಿ ಯಥೇಚ್ಛ ನೀರು ಶೇಖರಣೆಯಾಗಿದ್ದು, ನೀರಾವರಿಗೆ ಬಲ ಬಂದಿದೆ. ತಾಲೂಕಿನ ಯಾವುದೇ ಗ್ರಾಮ ಪಂಚಾಯಿತಿಗಳಲ್ಲಿ ಟ್ಯಾಂಕರ್ ನೀರಿಗೆ ಮೊರೆ ಹೋಗಬೇಕಾದ ಅವಶ್ಯಕತೆ ಇಲ್ಲ.
ಕೃಷಿಕರಲ್ಲಿ ಮಂದಹಾಸ
ಕಳೆದ ಕೆಲವು ವರ್ಷಗಳಿಂದ ಏಪ್ರಿಲ್ ಮೇ ತಿಂಗಳಿನಲ್ಲಿ ನೀರು ಇಲ್ಲದೆ ಅಡಕೆ, ತೆಂಗು ಹಾಗೂ ಇನ್ನಿತರ ತೋಟಗಾರಿಕಾ ಬೆಳೆಗಳು ಸುಟ್ಟು ಹೋಗಿದ್ದವು. ಆದರೆ ಈ ವರ್ಷ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಸಾಕುಪ್ರಾಣಿಗಳು ಹಾಗೂ ಕಾಡುಪ್ರಾಣಿಗಳು ಕಳೆದೆರಡು ವರ್ಷಗಳಿಂದ ಕುಡಿಯುವ ನೀರು ಸಿಗದೆ ಯಾತನೆ ಅನುಭವಿಸಿದ್ದು, ಕಾಡುಗಳಲ್ಲಿ ಎಲ್ಲೂ ನೀರು ಇರಲಿಲ್ಲ. ಸದ್ಯಕ್ಕೆ ಕಾಡುಪ್ರಾಣಿಗಳೂ ನೀರಿನ ಅಭಾವದಿಂದ ಮುಕ್ತವಾಗಿವೆ.
ಹೆಬ್ರಿ ಗ್ರಾಮದ ಅರ್ಧದಷ್ಟು ಜನರು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ನಿರಂತರ ಮಳೆ ಸುರಿಯುತ್ತಿರುವುದರಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಿಂಡಿಅಣೆಕಟ್ಟು ತುಂಬಿ ಹರಿಯುತ್ತಿದೆ.
ಸದಾಶಿವ ಸೇರ್ವೆಗಾರ್, ಪಿಡಿಒ ಹೆಬ್ರಿ ಗ್ರಾಪಂಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದಾಗಿ ಚಾರ ಗ್ರಾಮಕ್ಕೆ ಬಹಳಷ್ಟು ಉಪಯೋಗ ಆಗಿದೆ. ಹಿಂದೆ ಸೀತಾನದಿ ಬತ್ತಿ ಹೋಗಿ ನೀರಿಗೆ ಬಹಳಷ್ಟು ಸಮಸ್ಯೆ ಎದುರಾಗಿತ್ತು. ನಿರಂತರವಾಗಿ ಮಳೆ ಆಗುತ್ತಿರುವುದರಿಂದ ಮೇ ತಿಂಗಳಲ್ಲಿ ಕೂಡ ಯಥೇಚ್ಛ ನೀರು ಶೇಖರಣೆಯಾಗುವ ಲಕ್ಷಣ ಇದೆ.
ದಿನೇಶ್ ಶೆಟ್ಟಿ ಹುತ್ತುರ್ಕೆ, ಅಧ್ಯಕ್ಷರು, ಚಾರ ಗ್ರಾಪಂ.