

ಹಾಸನ: ಎರಡನೇ ದಿನವಾದ ಶನಿವಾರವೂ ಹಾಸನಾಂಬ ದೇವಿ ದರ್ಶನ ಸುಲಲಿತವಾಗಿ ನಡೆಯಿತು. ವಿವಿಧ ಗಣ್ಯರು ದೇವಿ ದರ್ಶನ ಪಡೆದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ಎಸ್.ತಂಗಡಗಿ, ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ್, ಚಾಮರಾಜನಗರ ಸಂಸದ ಸುನೀಲ್ ಬೋಸ್ ಇತರರು ದರ್ಶನ ಪಡೆದು ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಚಿವ ಶಿವರಾಜ ಎಸ್.ತಂಗಡಗಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಹಾಸನಾಂಬ ದೇವಿ ದರ್ಶನ ಮಾಡಿದ್ದೇವೆ. ಕಳೆದ ಬಾರಿಗಿಂತ ಇಂದು ವಿಶೇಷವಾಗಿದೆ. ಈ ಬಾರಿ ಜಿಲ್ಲಾಡಳಿತ ಜನರಿಗೆ ಯಾವುದೇ ತೊಂದರೆಯಾಗದಂತೆ ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದೆ ಎಂದರು.
91 ಸಾವಿರ ಭಕ್ತರು ಹಾಸನಾಂಬ ದರ್ಶನ
ಹಾಸನ: ಈವರೆಗೂ 91 ಸಾವಿರ ಭಕ್ತರು ಹಾಸನಾಂಬ ದರ್ಶನ ಪಡೆದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೈಗೌಡ ತಿಳಿಸಿದರು.
ಶನಿವಾರ ದರ್ಶನದ ಬಗ್ಗೆ ಪರಿಶೀಲನೆ ನಡೆಸಿ ನಂತರ ಮಾತನಾಡಿದ ಅವರು, ಶನಿವಾರ 2ರಿಂದ 3.30ರ ವರೆಗೆ ನೈವೇದ್ಯ ನಂತರ 3.30ರಿಂದ ಮತ್ತೆ ದರ್ಶನ ಆರಂಭ ಆಗಿದೆ. ಮಧ್ಯರಾತ್ರಿ 2 ಗಂಟೆವರೆಗೂ ನಿರಂತರ ದರ್ಶನ ಇರಲಿದೆ ಎಂದು ಹೇಳಿದರು.
ಕಳೆದ ಐದಾರು ವರ್ಷಗಳಿಗೆ ಹೋಲಿಸಿದರೆ ಇದು ದಾಖಲೆ, ಸಾರ್ವಜನಿಕರು ಧರ್ಮದರ್ಶನ ಕೂಡ ಕೇವಲ ಅರ್ಧಗಂಟೆಯಿಂದ ಒಂದೂವರೆ ಗಂಟೆಯಲ್ಲಿ ಮುಗಿಯುತ್ತಿದೆ ಎಂದು ಹೇಳಿದ್ದಾರೆ. ಇದರಿಂದ ನಮಗೆ ಬಹಳ ಸಂತೋಷವಾಗಿದೆ ಎಂದರು.
ಅ.15ಕ್ಕೆ ಸಿಎಂ, ಡಿಸಿಎಂ ದರ್ಶನಕ್ಕೆ ಸಮಯ ನಿಗದಿ ಆಗಿದೆ. ಅವರು ಯಾವ ಸಮಯಕ್ಕೆ ಬಂದರೂ ಜನರಿಗೆ ತೊಂದರೆ ಆಗಲ್ಲ. ಜನರು ಕಡಿಮೆ ಇರುವ ಸಮಯದಲ್ಲಿ ಅವರನ್ನು ಕರೆತಂದು ದರ್ಶನ ಮಾಡಿಸುತ್ತೇವೆ ಎಂದರು.