

ಹಲಗೂರು: ನಂಜಾಪುರದ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಡಿಜಿಟಲ್ ಗ್ರಂಥಾಲಯವನ್ನು ಸೋಮವಾರ ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಲಮೇಲಮ್ಮ ಉದ್ಘಾಟಿಸಿದರು.
ಇದೇ ವೇಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಾಸಬೋಯಿ ಮಾತನಾಡಿ, ಗೊಲ್ಲರಹಳ್ಳಿ ಮತ್ತು ನಂಜಾಪುರದಲ್ಲಿ ಗ್ರಂಥಾಲಯ ಪ್ರಾರಂಭ ಮಾಡಿರುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಗ್ರಂಥಾಲಯದಲ್ಲಿ ಕವಿಗಳು, ಮಹನೀಯರು ಬರೆದಿರುವ ಪುಸ್ತಕಗಳು ಇದೆ. ಅವುಗಳನ್ನು ಓದುವುದರಿಂದ ಅವರ ಜ್ಞಾನವೃದ್ಧಿಗೂ ಸಹಕಾರಿಯಾಗಲಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ರಾಜೇಶ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಗ್ರಂಥಾಲಯ ಪ್ರಾರಂಭ ಮಾಡಿರುವುದು ಶ್ಲಾಘನೀಯ. ಇದನ್ನು ಇಲ್ಲಿನ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಸಮಯ ವ್ಯರ್ಥ ಮಾಡದೆ ಗ್ರಂಥಾಲಯಕ್ಕೆ ಬಂದು ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಮತ್ತು ನಿಮ್ಮ ಮಕ್ಕಳನ್ನು ಗ್ರಂಥಾಲಯಕ್ಕೆ ಹೋಗಿ ಅಲ್ಲಿರುವ ಪುಸ್ತಕಗಳನ್ನು ಓದಿ ಎಂದು ಕಳಿಸಿಕೊಡಬೇಕು. ಮಹನೀಯರ ಚರಿತ್ರೆ ಇರುವ ಪುಸ್ತಕಗಳನ್ನು ಓದಿ ಜ್ಞಾನ ಮತ್ತು ವಿದ್ಯೆಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ರಾಜೇಶ್, ಹೇಮಾವತಿ, ಸಿದ್ದಯ್ಯ, ಮಹಾದೇವಮ್ಮ, ಕುಳ್ಳ ಮಾಧು, ಗ್ರಾಮ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ, ಕಾರ್ಯದರ್ಶಿ ಕಾಳರಾಜು, ಬಿಲ್ ಕಲೆಕ್ಟರ್ ಪ್ರಕಾಶ್, ಶಿಕ್ಷಕ ಪುಟ್ಟರಾಜು, ಶಿಕ್ಷಕ ಬಸವರಾಜು, ಕುನ್ನಯ್ಯ, ಕಾಂತರಾಜು, ಸಿದ್ದರಾಜು, ಮಂಜು ಇತರರು ಇದ್ದರು.