

ಬೆಂಗಳೂರು: ಕೃಷಿ ಜಾತ್ರೆ ಎಂದೇ ಕರೆಯಲಾಗುವ ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯ ಆಯೋಜನೆಯ ಕೃಷಿ ಮೇಳ ಈ ಬಾರಿ ಡಿಜಿಟಲ್ಮಯವಾಗಿರಲಿದೆ. ಹಸುಗಳು, ಕೋಳಿ, ಕುರಿಗಳ ಧ್ವನಿ, ಟ್ರಾಕ್ಟರ್, ಟಿಲ್ಲರ್ಗಳಂತಹ ಯಂತ್ರಗಳ ಓಡಾಟ, ಕೃಷಿ ಚಟುವಟಿಕೆಗಳ ಬಗೆಗಿನ ಚರ್ಚೆಗಳಿಂದಲೇ ತುಂಬಿರುತ್ತಿದ್ದ ಕೃಷಿ ಮೇಳದಲ್ಲಿ ಈ ಬಾರಿ ಆ ದೃಶ್ಯಗಳಾವುವೂ ಕಾಣಸಿಗುವುದಿಲ್ಲ.
ಕರೊನಾ ಸೋಂಕು ಮತ್ತು ಪ್ರವಾಹದ ಕಾರಣದಿಂದಾಗಿ ಈ ಬಾರಿ ಎಲ್ಲವೂ ಸರಳವಾಗಿ ಆಚರಣೆಗೊಳ್ಳುತ್ತಿದೆ. ಅದೇ ರೀತಿ ಕೃಷಿ ವಿಶ್ವವಿದ್ಯಾಲಯ ಆಯೋಜಿಸಲಿರುವ ಕೃಷಿ ಮೇಳವೂ ಸರಳವಾಗಿರಲಿದೆ. ಮೇಳಕ್ಕೆ ಪ್ರತಿದಿನ 200 ಜನರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಆಮೂಲಕ ಮೂರು ದಿನಗಳ ಮೇಳದಲ್ಲಿ 600 ಜನರು ಮಾತ್ರ ಪಾಲ್ಗೊಳ್ಳಬಹುದಾಗಿದೆ.
ಡಿಜಿಟಲ್ ಮೇಳ: ಕಡಿಮೆ ಜನರ ಪ್ರವೇಶಕ್ಕೆ ಅವಕಾಶ ನೀಡುತ್ತಿರುವ ಹಿನ್ನೆಲೆಯಲ್ಲಿ ಮೇಳ ವೀಕ್ಷಣೆ ಮಾಡುವುದು, ಮೇಳದಿಂದ ಕೃಷಿ ಬಗ್ಗೆ ಮಾಹಿತಿ ಪಡೆಯಲಿಚ್ಛಿಸುವವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರವನ್ನಿಡಲಾಗುತ್ತದೆ. ಫೇಸ್ಬುಕ್, ಟ್ವಿಟ್ಟರ್, ಯೂಟೂಬ್ಗಳ ಮೂಲಕ ಮೇಳದ ಪ್ರತಿ ಕಾರ್ಯಕ್ರಮಗಳು ನೇರ ಪ್ರಸಾರವಿರಲಿದೆ. ಅದಕ್ಕಾಗಿ ವೇದಿಕೆಯಲ್ಲಿ, ಮೇಳದ ಮಳಿಗೆಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಅದರ ಜತೆಗೆ ಡ್ರೋಣ್ ಮೂಲಕವೂ ಚಿತ್ರೀಕರಣ ನಡೆಸಲಾಗುತ್ತದೆ.
ತಜ್ಞರಿಂದ ಪ್ರಶ್ನೋತ್ತರ: ಮೇಳದಲ್ಲಿ ಪಾಲ್ಗೊಳ್ಳದವರು ಕೃಷಿ ವಿವಿಯ ಈಮೇಲ್, ವೆಬ್ಸೈಟ್ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಕೇಳುವ ಕೃಷಿ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರಿಂದ ಉತ್ತರಿಸುವ ಕೆಲಸವನ್ನೂ ಮಾಡಲಾಗುತ್ತದೆ. ಆ ಉತ್ತರಗಳು ಪ್ರತಿ 1 ಗಂಟೆಗೆ 10 ನಿಮಿಷದಂತೆ ಪ್ರಸಾರ ಮಾಡಲಾಗುತ್ತದೆ.
ಶಿಕ್ಷಣದ ಮಾಹಿತಿ: ಕೃಷಿ ವಿಜ್ಞಾನದಲ್ಲಿ ಪದವಿ ಪಡೆದಿರುವವರಿಗೆ ಮುಂದಿನ ಶಿಕ್ಷಣದ ಬಗ್ಗೆ, ವೃತ್ತಿ ಜೀವನದ ಬಗ್ಗೆ ಇರುವ ಗೊಂದಲ ನಿವಾರಣೆಯ ಕೆಲಸವನ್ನೂ ಕೃಷಿ ಮೇಳದ ಅವಧಿಯಲ್ಲಿ ಮಾಡಲಾಗುತ್ತದೆ. ಉಪನ್ಯಾಸಕರು, ತಜ್ಞರ ಮೂಲಕ ಮಾರ್ಗದರ್ಶನ ವೀಡಿಯೋವನ್ನು ನೀಡಲಾಗುತ್ತದೆ. ಜತೆಗೆ, ಈ ಬಾರಿಯ ಡಿಜಿಟಲ್ ಮೇಳದ ಬಗ್ಗೆ ರೈತರಿಂದ ಸಂದರ್ಶನವನ್ನು ಮಾಡಲಾಗುತ್ತದೆ.
ಕೃಷಿ ವಿವಿ ಮಳಿಗೆಗಳಿಗಷ್ಟೇ ಅವಕಾಶ: ಈವರೆಗಿನ ಕೃಷಿ ಮೇಳಗಳಲ್ಲಿ ಖಾಸಗಿ, ಸರ್ಕಾರಿ ಸಂಸ್ಥೆಗಳ ವಸ್ತುಗಳ ಪ್ರದರ್ಶನ, ಮಾರಾಟಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಕೃಷಿ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಮಳಿಗೆಗಳನ್ನಷ್ಟೇ ಹಾಕಲಾಗುತ್ತಿದೆ. ಉಳಿದ ಮಳಿಗೆಗಳಿಗೆ ಅವಕಾಶ ನೀಡುತ್ತಿಲ್ಲ.
ಇದನ್ನೂ ಓದಿ: ಧರ್ಮಕ್ಕೆ ಸೀಮಿತವಾಗಬಾರದು ಮಹಾಪುರುಷರು: ಮಹಮ್ಮದ್ ಕುಂಞ
ಮೂರು ದಿನ ಮುಂದಕ್ಕೆ: ಈ ಹಿಂದೆ ಕೃಷಿ ಮೇಳವನ್ನು ನ. 6ರಿಂದ 8ರವರೆಗೆ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ, ರಾಜ್ಯದಲ್ಲಿ ಮಳೆಯ ಅಬ್ಬರ ಜಾಸ್ತಿಯಿರುವ ಕಾರಣ ಮೇಳವನ್ನು ಮುಂದೂಡಲಾಗಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ಆನ್ಲೈನ್ ಮೂಲಕ ಮೇಳ ವೀಕ್ಷಣೆ ಕಷ್ಟವಾಗಲಿದೆ. ಎಲ್ಲೆಡೆ ನೆಟ್ವರ್ಕ್ ಸಿಗುವುದು ಅನುಮಾನವಾದ ಕಾರಣ, ಸಾಮಾಜಿಕ ಜಾಲತಾಣದ ಮೂಲಕ ಮೇಳ ವೀಸಲು ಸಾಧ್ಯವಿಲ್ಲ. ಹೀಗಾಗಿ ಮೇಳವನ್ನು ನ. 11ರಿಂದ 13ರವರೆಗೆ ಆಯೋಜಿಸಲು ನಿರ್ಧರಿಸಲಾಗಿದೆ.