ರಾಜ್ಯದ ಬಡವರ ಪಡಿತರಕ್ಕೆ ಡಿಜಿಟಲ್​ ಕನ್ನ:ಬಯೋ, ಓಟಿಪಿ ಇಲ್ಲದೆ ಅಕ್ಕಿ ವಿತರಣೆ

PDS scam
Published on

ಹರೀಶ್​ ಬೇಲೂರು ಬೆಂಗಳೂರು

ರಾಜ್ಯದಲ್ಲಿ ಕೋಟ್ಯಂತರ ಜನರ ಹಸಿವು ನೀಗಿಸುತ್ತಿರುವ ಕೇಂದ್ರದ "ಪ್ರಧಾನ ಮಂತ್ರಿ ಗರೀಬ್​ ಕಲ್ಯಾಣ ಅನ್ನ' ಹಾಗೂ ರಾಜ್ಯದ "ಅನ್ನಭಾಗ್ಯ'ಯೋಜನೆ ಅಕ್ಕಿಗೆ ಡಿಜಿಟಲ್​ ಮಾರ್ಗದಲ್ಲಿ ಕನ್ನ ಹಾಕುತ್ತಿರುವುದು ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ 1.17 ಕೋಟಿ ಬಿಪಿಎಲ್​, 10.80 ಲಕ್ಷ ಅಂತ್ಯೋದಯ ಕಾರ್ಡ್​ಗಳಿವೆ. ಆಹಾರ ಇಲಾಖೆ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳ ಮೂಲಕ ಲಾನುಭವಿಗಳಿಗೆ ಉಚಿತವಾಗಿ ಅಕ್ಕಿ ವಿತರಿಸುವ ಕಾರ್ಯವನ್ನು ಮಾಡುತ್ತಿದೆ. ಅಂಗಡಿ ಮಾಲೀಕರು ಬಿಪಿಎಲ್​, ಅಂತ್ಯೋದಯ ಕಾರ್ಡ್​ನ ಕುಟುಂಬ ಮುಖ್ಯಸ್ಥರೊಬ್ಬರ ಬಯೋಮೆಟ್ರಿಕ್​ನಲ್ಲಿ ಬೆರಳಚ್ಚು ಪಡೆದು ಆಧಾರ್​ ಓಟಿಪಿ ಮೂಲಕ ರೇಷನ್​ ಹಂಚಿಕೆ ಮಾಡಲಾಗುತ್ತದೆ. ಅಲ್ಲದೆ, ಗೆರೆ ಅಳಿಸಿದ ಕೆಲ ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ಬೆರಳಚ್ಚು ವಿನಾಯಿತಿ ನೀಡಲಾಗಿದ್ದು, ಅಂಥವರಿಗೆ ಅಂಗಡಿಯಲ್ಲಿ ಅಳವಡಿಸಿರುವ "ಐರಿಸ್​ ಸ್ಕ್ಯಾನರ್​​ನಲ್ಲಿ ಕಣ್ಣು ಸೆರೆ ಹಿಡಿದು ಅಕ್ಕಿ ವಿತರಿಸಲಾಗುತ್ತಿದೆ. ಆದರೂ, ವಿವಿಧ ಮಾರ್ಗಗಳಲ್ಲಿ ಯೋಜನೆ ದುರ್ಬಳಕೆಯಾಗುತ್ತಿದೆ.

ನ್ಯಾಯಬೆಲೆ ಅಂಗಡಿ ಮಾಲೀಕರು ರೇಷನ್​ ವಿತರಣೆ ವೇಳೆ ತೂಕದಲ್ಲಿ ಮೋಸ ಮಾಡಿದರೆ, ಅಕ್ಕಿ ಗಿರಣಿ ಮಾಲೀಕರು ಕಾಳಸಂತೆಯಲ್ಲಿ ಅಕ್ರಮವಾಗಿ ಅಕ್ಕಿ ಖರೀದಿಸಿ ಪಾಲಿಶ್​, ಸಾರ್ಟೆಕ್ಸ್​ ಮಾಡಿ ಬೇರೆ ಬೇರೆ ಬ್ರಾಂಡ್​ನ ಹೆಸರಿನಲ್ಲಿ ಪ್ಯಾಕಿಂಗ್​ ಮಾಡಿ ವಿದೇಶಗಳಿಗೆ, ರಾಜ್ಯದ ಮಾರುಕಟ್ಟೆಯಲ್ಲಿ ಹೆಚ್ಚಿನೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಅಕ್ಕಿಯನ್ನು ದಾಸ್ತಾನು ಮಾಡುವ ಸಗಟು ಮಳಿಗೆಗಳಲ್ಲಿ ಇಲಾಖೆಯ ಕೆಲ ಅಧಿಕಾರಿಗಳೇ ಕನ್ನ ಹಾಕುತ್ತಿದ್ದರೆ, ಭಾರತ ಆಹಾರ ನಿಗಮದ(ಎಫ್​​​​ಸಿಐ) ಗೋದಾಮಿನಿಂದ ಸಗಟು ಮಳಿಗೆಗಳಿಗೆ ಲಾರಿಗಳಲ್ಲಿ ಪಡಿತರ ಸಾಗಿಸುವ ವೇಳೆ ಲಾರಿ ಮಾಲೀಕರು, ಚಾಲಕರು, ಹಮಾಲಿಗಳು ಪ್ರತಿ ಚೀಲದಲ್ಲಿ 3&4 ಕೆಜಿ ಅಕ್ಕಿ ಕದ್ದು ಹೆಚ್ಚಿನ ಬೆಲೆಗೆ ಮಾರಿಕೊಳ್ಳುತ್ತಿದ್ದಾರೆ. ಕೆಲ ಕಾರ್ಡ್​ದಾರರು ಸತ್ತಿರುವ ಕುಟುಂಬದ ಸದಸ್ಯರ ಹೆಸರಿನಲ್ಲಿ ಅಕ್ಕಿ ಪಡೆದರೆ, ಕೆಲವರು ಪ್ರತಿ ತಿಂಗಳು ಪಡೆಯುವ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಇಲಾಖೆಯ ವೆಬ್​ಸೈಟ್​ ಹ್ಯಾಕ್​ ಮಾಡಿ ಬಯೋಮೆಟ್ರಿಕ್​ ಅಥವಾ ಓಟಿಪಿ ಇಲ್ಲದೆ ಪಡಿತರ ಪಡೆಯುವ ದಂಧೆ ಬೆಳಕಿಗೆ ಬಂದಿದ್ದು, ಪ್ರತಿ ತಿಂಗಳು ಸಾವಿರಾರು ಕಾರ್ಡ್​ಗಳ ಪಾಲಿನ ಅಕ್ಕಿಯನ್ನು ಅಕ್ರಮವಾಗಿ ಕಾಳಸಂತೆಗೆ ಸಾಗಿಸಲಾಗುತ್ತಿದೆ.

ಆಯಾ ತಿಂಗಳು 20ಕ್ಕೆ ಕೊನೆ?

"ಪ್ರಧಾನ ಮಂತ್ರಿ ಗರೀಬ್​ ಕಲ್ಯಾಣ ಅನ್ನ' ಹಾಗೂ "ಅನ್ನಭಾಗ್ಯ'ಯೋಜನೆ ತಲಾ 5 ಕೆಜಿ ಸೇರಿ ಒಟ್ಟು 10 ಕೆಜಿಯನ್ನು ಬಿಪಿಎಲ್​ ಹೊಂದಿರುವ ಪ್ರತಿ ಸದಸ್ಯನಿಗೆ ಉಚಿತವಾಗಿ ನೀಡಲಾಗುತ್ತಿದೆ. ಅಂತ್ಯೋದಯ ಕಾರ್ಡ್​ಗೆ 20 ಕೆಜಿ ಅಕ್ಕಿ, 15 ಕೆಜಿ ರಾಗಿ ಸೇರಿ ಒಟ್ಟು 35 ಕೆಜಿ ಆಹಾರ ಪದಾರ್ಥ ಸಿಗುತ್ತಿದೆ. ಸಗಟು ಮಳಿಗೆಗಳಿಂದ ನ್ಯಾಯಬೆಲೆ ಅಂಗಡಿ ಮಾಲೀಕರು ಆಹಾರ ಪದಾರ್ಥ ಎತ್ತುವಳಿ ಮಾಡಿದ ಬಳಿಕ ಆಯಾ ತಿಂಗಳಿನ 5ನೇ ತಾಕೀಖಿನಿಂದ ಕಾರ್ಡ್​ದಾರರಿಗೆ ಪಡಿತರ ಹಂಚಿಕೆ ಶುರು ಮಾಡಲಾಗುತ್ತದೆ. 20ನೇ ತಾರೀಖಿನೊಳಗೆ ಮಾಲೀಕರು ಹಂಚಿಕೆ ಕೊನೆಗೊಳಿಸುತ್ತಾರೆ. ಹೀಗಿರುವಾಗ, ತಿಂಗಳಿನ ಕೊನೆಯ ಎರಡು ದಿನದಲ್ಲಿ 10-12 ಸೆಕೆಂಡ್​ನಲ್ಲಿ ಆಹಾರ ಪದಾರ್ಥಗಳನ್ನು ಹಂಚಿಕೆ ಮಾಡಿರುವುದು ಇಲಾಖೆಯ ವೈಬ್​ಸೈಟ್​ನಲ್ಲಿ ಪತ್ತೆಯಾಗಿದೆ.

ಡಿಜಿಟಲ್​ ಕನ್ನ ಹೇಗೆ?

*ಪಡಿತರ ಹಂಚಿಕೆ ಮಾಹಿತಿ ಬಗ್ಗೆ ಆಹಾರ ವೆಬ್​ಸೈಟ್​ನಲ್ಲಿ ಲಭ್ಯ

* ಆಯಾ ತಿಂಗಳಲ್ಲಿ ಪಡಿತರ ಪಡೆದವರು, ಪಡೆಯದವರ ವಿವರ ದೊರೆಯಲಿದೆ

* ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯದ ಕಾರ್ಡ್​ ಮಾಹಿತಿ ಸಂಗ್ರಹಿಸುವ ಮಾಲೀಕರು

* ಪ್ರತಿ ತಿಂಗಳು ಕೊನೆಯ 2 ದಿನ ಕೆಲ ಕಾರ್ಡ್​ಗಳಿಗೆ ಪಡಿತರ ಹಂಚಿಕೆ

* 10 ಸೆಕೆಂಡ್​ ಅಂತರದಲ್ಲಿ ಎರಡೆರಡು ಕಾರ್ಡ್​ಗಳಿಗೆ ಪಡಿತರ ವಿತರಣೆ

* ರಾತ್ರಿ 9 ರಿಂದ 10 ಗಂಟೆ ಅವಧಿಯಲ್ಲಿ ಪಡಿತರ ಹಂಚಿಕೆ ಮಾಹಿತಿ

* ಬಯೋ ಪಡೆಯಲು ಕನಿಷ್ಠ 2 ನಿಮಿಷ ಬೇಕು. ಆದರೆ, ಕೇವಲ 10-12 ಸೆಕೆಂಡ್​ನಲ್ಲಿ ಬಯೋ ಪಡೆದು ಅಕ್ಕಿ ವಿತರಣೆ

* ತಿಂಗಳಿನ ಕೊನೆಯ 2 ದಿನದಲ್ಲಿ ವೆಬ್​ಸೈಟ್​ ಹ್ಯಾಕ್​

* ನ್ಯಾಯ ಬೆಲೆಅಂಗಡಿಯವರಿಂದ ಬಿಪಿಎಲ್​ ಕಾರ್ಡ್​ ದುರ್ಬಳಕೆ

* ಅಕ್ಕಿ ಮಾರಾಟದಿಂದ ಬಂದ ಹಣವನ್ನು ಅಧಿಕಾರಿಗಳಿಗೂ ಹಂಚಿಕೆ

* ದಂಧೆಯಲ್ಲಿ ಇಲಾಖೆಯ ಕೆಲ ಅಧಿಕಾರಿಗಳೂ ಶಾಮೀಲು

*ಚೀಟಿದಾರರಿಗೆ ಮಾಹಿತಿಯಿಲ್ಲದೆ ಪಡಿತರ ದುರ್ಬಳಕೆ

* ಈ ಬಗ್ಗೆ ಕಾರ್ಡ್​ದಾರರು ಪ್ರಶ್ನಿಸಿದರೆ ತಾಂತ್ರಿಕ ದೋಷವೆಂದು ನೆಪ ಹೇಳುವ ಮಾಲೀಕರು

9,584 ಕ್ವಿಂಟಾಲ್​ ಜಪ್ತಿ

2024ರ ಏ.1ರಿಂದ 2025ರ ಫೆ.28ರವರೆಗೆ ಅಕ್ರಮವಾಗಿ ಪಡಿತರ ಮಾರಾಟ ಮತ್ತು ದಾಸ್ತಾನು ಸಂಬಂಧಪಟ್ಟಂತೆ 285 ಕೇಸ್​ ದಾಖಲಿಸಲಾಗಿದೆ. ಈ ಅವಧಿಯಲ್ಲಿ 8,427 ಕ್ವಿಂಟಾಲ್​ ಅಕ್ಕಿ, 35 ಕ್ವಿಂಟಾಲ್​ ರಾಗಿ, 341 ಕ್ವಿಂಟಾಲ್​ ಗೋಧಿ, 222 ಕ್ವಿಂಟಾಲ್​ ಬೇಳೆ, 505 ಕ್ವಿಂಟಾಲ್​ ಜೋಳ, 53 ಕ್ವಿಂಟಾಲ್​ ಸಕ್ಕರೆ ಸೇರಿ ಒಟ್ಟು 9,584 ಕ್ವಿಂಟಾಲ್​ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net