ಅಗೆದಿರುವ ರಸ್ತೆಯ ದುರಸ್ತಿಗೆ ಪಟ್ಟು

FotoJet (2)
Published on

ಎಚ್.ಎನ್. ವ್ಯಾಲಿ ಕಾಮಗಾರಿ ತಡೆದು ಮಿಟ್ಟೇಮರಿ ಗ್ರಾಮಸ್ಥರ ಆಕ್ರೋಶ 2 ತಿಂಗಳಿಂದ ಕಾಲಹರಣ ಆರೋಪ

ಬಾಗೇಪಲ್ಲಿ: ಎಚ್.ಎನ್. ವ್ಯಾಲಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಉದ್ದೇಶಕ್ಕಾಗಿ ಅಗೆದ ರಸ್ತೆಯನ್ನು ದುರಸ್ತಿ ಮಾಡುವಂತೆ ಒತ್ತಾಯಿಸಿ ಮಿಟ್ಟೇಮರಿ ಗ್ರಾಮಸ್ಥರು ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಿಟ್ಟೇಮರಿ ಗ್ರಾಮದಲ್ಲಿ ಕಳೆದ ಎರಡು ತಿಂಗಳಿಂದ ಎಚ್.ಎನ್. ವ್ಯಾಲಿ ಯೋಜನೆಯ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಗುತ್ತಿಗೆದಾರರು ಪೈಪ್ ಅಳವಡಿಸಲು ರಸ್ತೆಗಳನ್ನು ಅಗೆದು ಹಾಗೇಯೇ ಬಿಟ್ಟಿರುವ ಕಾರಣ ರೊಚ್ಚಿಗೆದ್ದ ಗ್ರಾಮಸ್ಥರು ಶುಕ್ರವಾರ ಕಾಮಗಾರಿಗೆ ಪೈಪ್ ಸಾಗಿಸುವ ವಾಹನ, ಜೆಸಿಬಿ ಯಂತ್ರಗಳನ್ನು ತಡೆದು ಕಾಮಗಾರಿಗೆ ಅಡ್ಡಿಪಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ನರೇಶ್ ಮಾತನಾಡಿ, ಎಚ್.ಎನ್. ವ್ಯಾಲಿ ಪೈಪ್‌ಲೈನ್ ಕಾಮಗಾರಿಗೆ ವಿರೋಧವಿಲ್ಲ. ಆದರೆ, ಪೈಪ್‌ಲೈನ್ ಅಳವಡಿಸುವ ಉದ್ದೇಶಕ್ಕಾಗಿ ರಸ್ತೆ, ಕುಡಿಯುವ ನೀರು ಸರಬರಾಜು ಪೈಪ್, ಕಿತ್ತುಹಾಕಿರುವ ಚರಂಡಿಗಳನ್ನು ಸರಿಪಡಿಸದೆ 2 ತಿಂಗಳಿಂದ ಕಾಲಹರಣ ಮಾಡಲಾಗುತ್ತಿದೆ. ಕಾಮಗಾರಿಗೆ ಅನುಮತಿ ಕೊಟ್ಟಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಗ್ರಾಪಂ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ. ಗುತ್ತಿಗೆದಾರರನ್ನು ಎಚ್ಚರಿಸಬೇಕಾದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣ ಗ್ರಾಮದ ರಸ್ತೆಗಳು ಹದಗೆಟ್ಟು ಧೂಳು ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು, ವಯೋವೃದ್ಧರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದರು.

ಗ್ರಾಮದ ನರಸಿಂಹಮೂರ್ತಿ, ಬಾಲಾಜಿ, ಶ್ರೀನಿವಾಸ್, ರಾಜಮ್ಮ, ಆನಂದ್, ಸ್ಟುಡಿಯೋ ಮಂಜು, ಅಶೋಕ, ಶ್ರೀನಿವಾಸ್, ವಿನೋದ್ ಕುಮಾರ್, ಸುಬ್ರಮಣಿ, ಸಂತೋಷ್, ರಾಜು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net