ಹೆದ್ದಾರಿಯ ಆಮೆಗತಿ ಕಾಮಗಾರಿಯಿಂದ ಸಂಕಷ್ಟ

kkp
Published on

 ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಆಯುಕ್ತರ ನಿರ್ದೇಶನ

 ಕನಕಪುರ: ರಾಷ್ಟ್ರೀಯ ಹೆದ್ದಾರಿ ಹಾಗೂ ನಗರಸಭೆ ವ್ಯಾಪ್ತಿಯ ಗುತ್ತಿಗೆದಾರರ ಆಮೆಗತಿ ಕಾಮಗಾರಿಯಿಂದ ಜನ ಸಂಕಷ್ಟಗಳನ್ನು ಎದುರಿಸುತ್ತಿರುವುದಾಗಿ ನಗರಸಭೆ ಸದಸ್ಯರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಧ್ಯೆ ಹೇಮಾ ರಾಜು ಅವರ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರು, ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರು ಯುಜಿಡಿ ವ್ಯವಸ್ಥೆ ಇಲ್ಲದೆ ರಸ್ತೆ ಕಾಮಗಾರಿ ನಿರ್ವಹಿಸುತ್ತಿದ್ದು, ಇದರಿಂದ ನಗರ ಮಧ್ಯದಲ್ಲಿನ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಅಲ್ಲದೆ ಈಗಾಗಲೇ ಮುಗಿದ ಕಾಮಗಳಿಗೆ ಸಂಚಾರಕ್ಕೆ ಅವಕಾಶ ನೀಡದ ಕಾರಣ ಸಾರ್ವಜನಿಕರು ನಿತ್ಯ ಪರದಾಡುತ್ತಿದ್ದಾರೆ ಎಂದು ಸದಸ್ಯರಾದ ಕೋಟೆ ಕಿರಣ್​, ಜಯರಾಂ, ಸ್ಟುಡಿಯೋ ಚಂದ್ರು, ವಿಜಯಕುಮಾರ್​ ಸೇರಿ ಹಲವರು ಅಸಮಾಧಾನ ವ್ಯಕ್ತಪಡಿಸಿದರು.

ನಗರಸಭೆ ಆಯುಕ್ತ ಎಂ.ಎಸ್​.ಮಹದೇವ್​ ಸಹ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಅಥವಾ ಗುತ್ತಿಗೆದಾರರಾಗಲಿ ಯಾರೂ ಸಹ ಎಂ.ಜಿ ರಸ್ತೆ ಕಾಮಗಾರಿ ಸಮಸ್ಯೆ ಬಗ್ಗೆ ನಗರಸಭೆಯೊಂದಿಗೆ ಚರ್ಚಿಸದೆ ಮನಸ್ಸೋ ಇಚ್ಛೆ ಕಾಮಗಾರಿ ನಿರ್ವಹಿಸುತ್ತಿದ್ದಾರೆ ಎಂದರಲ್ಲದೇ, ರಸ್ತೆ ಕಾಮಗಾರಿ ಬಗ್ಗೆ ಚರ್ಚಿಸಿ, ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ನಗರಸಭೆ ಇಂಜಿನಿಯರ್​ಗಳಿಗೆ ನಿರ್ದೇಶಿಸಿದರು.

ನಗರದ ಎಲ್ಲ ವಾರ್ಡ್​ಗಳಲ್ಲಿಯೂ ಸಮರ್ಪಕ ಬೀದಿದೀಪ ಅಳವಡಿಸಲು ಸೂಚಿಸಿದ ಸದಸ್ಯರು, ನಗರ ವ್ಯಾಪ್ತಿಯಲ್ಲಿರುವ ಪರವಾನಗಿ ಪಡೆಯದ ಕುರಿ, ಕೋಳಿ, ಮಾಂಸದ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಳಾಗುವುದು ಹಾಗೂ ಸಾರ್ವಜನಿಕ ಇ&ಖಾತಾ ಬದಲಾವಣೆ ಅರ್ಜಿಯನ್ನು ಆನ್​ಲೈನ್​ ಮೂಲಕ ಪಡೆದು ಖಾತೆ ಮಾಡಲು ಬೇಕಾದ ದಾಖಲೆಗಳ ಬಗ್ಗೆ ಮೊದಲೇ ಸೂಕ್ತ ಮಾಹಿತಿ ತಿಳಿಸಿ ನಂತರ ದಾಖಲೆಗಳನ್ನು ಪರಿಶೀಲಿಸಿ ಇ&ಖಾತಾ ಮಾಡಿಕೊಡಬೇಕು. ನಗರಸಭಾ ವ್ಯಾಪ್ತಿಯಲ್ಲಿ ಏಕಬಳಕೆ ಪ್ಲಾಸ್ಟಿಕ್​ ನಿಷೇಧ ಮಾಡಲಾಗಿದ್ದು, ನಿಯಮ ಉಲ್ಲಂಘಿಸಿ ಕಲ್ಯಾಣ ಮಂಟಪ ಅಥವಾ ಇತರ ಸಮಾರಂಭಗಳಲ್ಲಿ ಪ್ಲಾಸ್ಟಿಕ್​ ಬಳಕೆ ಮಾಡಿದ್ದಲ್ಲಿ ಕಾನೂನು ಕ್ರಮ ಜರುಗಿಸುವ ಜತೆಗೆ ಕಲ್ಯಾಣ ಮಂಟಪಗಳ ಲೈಸೆನ್ಸ್​ ರದ್ದುಗೊಳಿಸುವುದಾಗಿ ಸಭೆಯಲ್ಲಿ ಸರ್ವಾನುಮತಿಯಿಂದ ರ್ನಿಣಯಿಸಿತು.

ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸದ ಗುತ್ತಿಗೆದಾರರ ಪರವಾನಗಿಯನ್ನು ರದ್ದುಗೊಳಿಸಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಹಾಗೂ ನಗರಸಭೆಯ ಕೆಲವು ನೌಕರರು ಅನುಮತಿ ಪಡೆಯದೆ ಗೈರಾಗುತ್ತಿರುವ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿ, ಗೈರಾದವರ ಮೇಲೆ ಶಿಸ್ತುಕ್ರಮ ಕೈಗೊಳಬೇಕೆಂದು ಸದಸ್ಯರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net