ನಿಗಮ, ಮಂಡಳಿಗೆ ಅಭಿಪ್ರಾಯ ಭೇದ: ಆಯ್ಕೆ ವಿಧಾನಕ್ಕೆ ಅಪಸ್ವರ

Congress (6)
Published on

ಬೆಂಗಳೂರು: ನಿಗಮ, ಮಂಡಳಿ ನೇಮಕ ವಿಚಾರದಲ್ಲಿ ರಾಜ್ಯ ನಾಯಕರಲ್ಲಿ ಅಭಿಪ್ರಾಯ ಭೇದ ಎದ್ದುಕಾಣಿಸಿದ್ದು, ಪ್ರಮುಖ ನಾಯಕರಿಂದ ವ್ಯತಿರಿಕ್ತ ಹೇಳಿಕೆಗಳು ವ್ಯಕ್ತವಾಗಿದೆ.

ಒಂದೆಡೆ ಸಂಭಾವ್ಯರ ಪಟ್ಟಿ ಸಿದ್ಧಪಡಿಸಲು ಹತ್ತಾರು ಬಾರಿ ಸಭೆ ನಡೆಸಿದರೂ ಅದರ ಬಿಡುಗಡೆಗೆ ಒಂದಿಲ್ಲೊಂದು ಸವಾಲು ಎದುರಾಗುತ್ತಲೇ ಇದೆ. ಇದೀಗ ಸಿಎಂ, ಡಿಸಿಎಂ ಹೊರತಾಗಿ ಇತರರೂ ದನಿ ಎತ್ತಲಾರಂಭಿಸಿದ್ದಾರೆ. ಮಂಗಳವಾರ ಹೇಳಿಕೆ ನೀಡಿರುವ ಜಿ. ಪರಮೇಶ್ವರ, ನಿಗಮ-ಮಂಡಳಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕಾತಿ ವಿಚಾರವಾಗಿ ಅಸಮಾಧಾನದ ದನಿ ಹೊರಹಾಕಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಮುಖಂಡರ ಕೆಲಸ ನಮಗೆ ಗೊತ್ತಿರುತ್ತೆ. ಸಿಎಂ ಹಾಗೂ ಪಕ್ಷದ ಅಧ್ಯಕ್ಷರು ಇದ್ದಾರೆ. ಆಯ್ಕೆ ವಿಚಾರದ ಜವಾಬ್ದಾರಿಯನ್ನು ಅವರಿಗೆ ಬಿಡಬೇಕು ಎಂದು ಹೇಳಿದ ಅವರು, ಸಿಎಂ, ಡಿಸಿಎಂ ಜಿಲ್ಲಾ ನಾಯಕರ ಜತೆ ಮಾತಾಡಿ ಪಟ್ಟಿ ಮಾಡಬೇಕು. ಅದರೆ ಈಗ ಪಕ್ಷದ ಪ್ರಧಾನ ಕಾರ್ಯದರ್ಶಿಯವರೇ ಮಾಡುತ್ತಿದ್ದಾರೆ. ಹೀಗಾಗಿ ಪಟ್ಟಿ ಸಿದ್ಧಪಡಿಸುವುದು ನಿಧಾನವಾಗಿದೆ. ನೋಡೋಣ ಏನು ಮಾಡುತ್ತಾರೆ ಎಂದರು.

ನಾನು ಸಹ 8 ವರ್ಷ ಪಕ್ಷದ ಅಧ್ಯಕ್ಷನಾಗಿದ್ದೆ. ಯಾರು ಯಾರು ಕೆಲಸ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಹತ್ತಾರು ವರ್ಷ ಪಕ್ಷಕ್ಕೆ ದುಡಿದವರಿದ್ದಾರೆ. ಅವರಿಗೆ ಅಧಿಕಾರ ಕೊಡಬೇಕು. ನಮ್ಮ ಅಭಿಪ್ರಾಯ ಪಡೆಯದೇ ಇರುವುದರಿಂದ ಹೀಗೆ ಆಗಿದೆ. ಕೆಲಸ ಮಾಡದವರಿಗೆ ಅಧಿಕಾರ ಕೊಟ್ಟರೆ, ಕೆಲಸ ಮಾಡಿರುವರಿಗೆ ನೋವು, ಅಸಮಾಧಾನವಾಗುತ್ತದೆ. ಹೀಗಾಗಿ ಮುಖಂಡರು, ಜಿಲ್ಲಾ ಅಧ್ಯಕ್ಷರ ಸಲಹೆಗಳನ್ನು ಕೇಳಬೇಕಾಗುತ್ತದೆ ಎಂದು ಹೇಳಿದರು.

ಈ ಮಾತಿಗೆ ಸಿಎಂ, ಡಿಸಿಎಂ ಇಬ್ಬರೂ ಪ್ರತಿಕ್ರಿಯೆ ನೀಡಿದ್ದಾರೆ. ನಿಗಮ ಮಂಡಳಿ ನೇಮಕ ವಿಚಾರದಲ್ಲಿ ನನ್ನ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂಬ ಪರಮೇಶ್ವರ್ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಎಲ್ಲರ ಅಭಿಪ್ರಾಯ ಪಡೆಯಲು ಕಷ್ಟವಾಗುತ್ತೆ ಎಂದು ಕಡ್ಡಿ ಮುರಿದಂತೆ ಹೇಳಿದರು.

ನಾನು ಪರಮೇಶ್ವರ್ ಜತೆ ಮಾತನಾಡಿದ್ದೇನೆ. ನಿಗಮ ಮಂಡಳಿಗಳಿಗೆ ನೇಮಕಾತಿಗೆ ಶಾಸಕರದ್ದು ಎಲ್ಲ ಕ್ಲಿಯರ್ ಆಗಿದೆ. ಇನ್ನು ಕಾರ್ಯಕರ್ತರ ನೇಮಕದ ಬಗ್ಗೆ ಚರ್ಚೆ ಆಗುತ್ತಿದೆ. ನಾವು ಮತ್ತು ಡಿಕೆಶಿ ಚರ್ಚೆ ನಡೆಸಿದ್ದೇವೆ. ಸುರ್ಜೆವಾಲ ಬಳಿ ಪಟ್ಟಿ ಇದೆ. ವೇಣುಗೋಪಾಲ್ ಸಹಿ ಆಗಬೇಕಿದೆ ಎಂದು ಸ್ಪಷ್ಟಡಿಸಿದರು.

ಇನ್ನು ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿ, ಎಲ್ಲರ ಅಭಿಪ್ರಾಯವನ್ನು ಪಡೆದು, ಮಾರ್ಗಸೂಚಿ ನಿಗದಿ ಮಾಡಿದ್ದು, ಅದರಂತೆ ಎಲ್ಲರಿಗೂ ಅಧಿಕಾರ ಹಂಚಲಾಗುವುದು ಎಂದು ತಿಳಿಸಿದರು.

ನಿಗಮ- ಮಂಡಳಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನೇಮಕ ಮಾಡುವಾಗ ನಮ್ಮ ಅಭಿಪ್ರಾಯವನ್ನು ಯಾರೂ ಕೇಳಿಲ್ಲ. ಒಂದೆರಡು ಹೆಸರು ಕೊಡಿ ಅಂದಾಗ ಕೊಟ್ಟಿದ್ದೇನೆ. ಆದರೆ, ನಮ್ಮ ಜತೆ ಮಾತಾಡಿ ಪಟ್ಟಿ ಮಾಡಿಲ್ಲ.

| ಡಾ.ಜಿ.ಪರಮೇಶ್ವರ್ ಗೃಹಸಚಿವ

ಪ್ರಮುಖ ಸಚಿವರ ಹಿಂದೇಟು

ನಿಗಮ ಮಂಡಳಿಗೆ ಹಿರಿಯ ಹಾಗೂ ಪ್ರಭಾವಿ ಶಾಸಕರನ್ನು ನೇಮಕ ಮಾಡಿದರೆ ಅಧಿಕಾರ ಬಲ ಕುಂದಲಿದೆ ಎಂದು ಭಾವಿಸಿರುವ ಕೆಲವು ಸಚಿವರು, ತಮ್ಮ ಅಭಿಪ್ರಾಯ ಪಡೆದೇ ಇಲಾಖೆ ಅಧೀನದ ನಿಗಮ, ಮಂಡಳಿಗೆ ನೇಮಕ ಮಾಡಬೇಕೆಂದು ಚರ್ಚೆ ನಡೆಸಿರುವ ಬೆಳವಣಿಗೆ ನಡೆದಿದೆ. ನಿಗಮ, ಮಂಡಳಿಗಳು ಇಲಾಖೆ ಬಜೆಟ್​ನ ದೊಡ್ಡ ಪಾಲನ್ನು ಪಡೆದುಕೊಳ್ಳುತ್ತವೆ, ಅಲ್ಲಿಗೆ ಪ್ರಭಾವಿ ಶಾಸಕರು ಅವಕಾಶ ಪಡೆದರೆ ಅಲ್ಲಿನ ವ್ಯವಹಾರವನ್ನು ಅವರೇ ನಿಭಾಯಿಸುತ್ತಾರೆ. ಇದರಿಂದ ಸಚಿವ ಸ್ಥಾನದ ಮಹತ್ವ ಕಡಿಮೆಯಾಗಲಿದೆ. ಮುಂದೆ ಚುನಾವಣೆ ಕೂಡ ನಿಭಾಯಿಸಬೇಕಾಗಿದೆ, ಜವಾಬ್ದಾರಿ ನೀಡಲಾಗಿದೆ. ಈ ಕಾರಣಕ್ಕೆ ದೆಹಲಿಯಲ್ಲಿ ಕುಳಿತು ನಿಗಮ, ಮಂಡಳಿಗೆ ಹೆಸರನ್ನು ಅಂತಿಮಗೊಳಿಸಬಾರದು, ತಮ್ಮನ್ನು ಸಂರ್ಪಸಿ ಹೊಂದಾಣಿಕೆಯಾಗುವಂತಹ ಶಾಸಕರನ್ನೇ ಪರಿಗಣಿಸಬೇಕೆಂಬ ವಾದವನ್ನು ಹೈಕಮಾಂಡ್ ಮುಂದೆ ಇಟ್ಟಿದ್ದಾರೆಂದು ಗೊತ್ತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net