

ವಿಜಯಪುರ: ಬ್ರೇಕ್ ಫೇಲ್ ಆದ ಪರಿಣಾಮ ಡೀಸೆಲ್ ಟ್ಯಾಂಕರ್ವೊಂದು ಪಲ್ಟಿಯಾಗಿದ್ದು, ಬಿಟ್ಟಿಯಾಗಿ ಸಿಗುತ್ತಿರುವ ಡೀಸೆಲ್ ತುಂಬಿಕೊಂಡು ಹೋಗಲು ಜನರು ಮುಗಿಬಿದ್ದ ಪ್ರಸಂಗವೂ ನಡೆದಿದೆ. ವಿಜಯಪುರ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ.
ವಿಜಯಪುರ ಹೊರವಲಯದ ರಂಭಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಡೀಸೆಲ್ ಟ್ಯಾಂಕರ್ ಬ್ರೇಕ್ ಫೇಲ್ ಆಗಿ ಪಲ್ಟಿಯಾಗಿದೆ. ಪರಿಣಾಮವಾಗಿ, ಅದರಿಂದ ಡೀಸೆಲ್ ಸೋರಲಾರಂಭಿಸಿದ್ದು, ಸ್ಥಳೀಯರು ಮತ್ತು ದಾರಿಹೋಕರು ಸಿಕ್ಕಷ್ಟು ಡೀಸೆಲ್ ತುಂಬಿಸಿಕೊಳ್ಳಲು ಮುಗಿಬಿದ್ದಿದ್ದರು.
ಸ್ಥಳಕ್ಕೆ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಹಾಗೂ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಜನರನ್ನು ಚದುರಿಸಲು ಹರಸಾಹಸಪಟ್ಟರು. ಈ ಟ್ಯಾಂಕರ್ ಕಲಬುರಗಿಯಿಂದ ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣಕ್ಕೆ ಹೊರಟಿತ್ತು.