ಜಿಲ್ಲೆ ಮರೆತರೇ ರೇಷ್ಮೆ ಸಚಿವರು?

21-03-rama-silk market
Published on

* 14 ತಿಂಗಳು ಕಳೆದರೂ ಜಿಲ್ಲೆಯತ್ತ ಮುಖ ಮಾಡದ ಸಚಿವ ಕೆ.ವೆಂಕಟೇಶ್​

ಗಂಗಾಧರ್​ ಬೈರಾಪಟ್ಟಣ ರಾಮನಗರ

ಸಿಲ್ಕು ಮಿಲ್ಕಿಗೆ ಹೆಸರು ಮಾಡಿರುವ ರಾಮನಗರ ಜಿಲ್ಲೆಯನ್ನು ರೇಷ್ಮೆ ಕೃಷಿ ಮತ್ತು ಪಶುಸಂಗೋಪನಾ ಸಚಿವರು ಮರತೇಬಿಟ್ಟರೇ?.. ಹೀಗೊಂದು ಪ್ರಶ್ನೆ ಜಿಲ್ಲೆಯ ರೇಷ್ಮೆ ಬೆಳೆಗಾರರು ಮತ್ತು ಇದರ ಅವಲಂಬಿತ ಜನರಲ್ಲಿ ಉದ್ಭವವಾಗಿದೆ.

ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು 14 ತಿಂಗಳು ಕಳೆದಿವೆ. ಜಿಲ್ಲಾ ಉಸ್ತುವಾರಿ ಸಚಿರಾದಿಯಾಗಿ ಕಂದಾಯ, ಕೃಷಿ , ಹೀಗೆ ಬೇರೆ ಇಲಾಖೆ ಸಚಿವರು ರಾಮನಗರಕ್ಕೆ ಬಂದು ರೈತರ ಸಮಸ್ಯೆ ಆಲಿಸುವ ಕೆಲಸ ಮಾಡಿದ್ದಾರೆ.

ಆದರೆ, ರೇಷ್ಮೆ ಉತ್ಪಾದನೆ ಮೂಲಕವೇ ರೇಷ್ಮೆ ನಾಡು ಎಂದು ಖ್ಯಾತಿ ಪಡೆದಿರುವ ರಾಮನಗರ ಜಿಲ್ಲೆ ರಾಜಧಾನಿಗೆ ಹತ್ತಿರದಲ್ಲೇ ಇದ್ದರೂ ರೇಷ್ಮೆ ಸಚಿವ ಕೆ. ವೆಂಕಟೇಶ್​, ಜಿಲ್ಲೆಗೆ ಬಂದು ರೈತರ ಸಮಸ್ಯೆ ಆಲಿಸಲು ಮುಂದಾಗದಿರುವುದೇ ಪ್ರಶ್ನೆಗೆ ಕಾರಣವಾಗಿದೆ.

ಸಮಸ್ಯೆ ನೂರಾರು:

ರಾಮನಗರ ಜಿಲ್ಲೆಯಲ್ಲಿ ಸುಮಾರು 30 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತದೆ. ಮಾಗಡಿ ರೇಷ್ಮೆ ಮೊಟ್ಟೆ ಉದ್ಪಾದನೆ ಮಾಡಲು ಬಳಕೆ ಮಾಡುವ ಗೂಡುಗಳನ್ನು ಬೆಳೆಲಾಗುತ್ತದೆ. ಉಳಿದ ನಾಲ್ಕೂ ತಾಲೂಕುಗಳಲ್ಲಿ ನೂಲು ಉತ್ಪಾದನೆಗೆ ರೇಷ್ಮೆ ಬೆಳೆಲಾಗುತ್ತದೆ. 3 ಸಾವಿರಕ್ಕೂ ಹೆಚ್ಚು ರೀಲಿಂಗ್​ ಕೇಂದ್ರಗಳು ರಾಮನಗರ ಒಂದರಲ್ಲಿಯೇ ಇದ್ದು, ಸಾವಿರಾರು ಮಂದಿ ರೇಷ್ಮೆ ಕೃಷಿ ಮತ್ತು ನಂತರದ ಉದ್ಯಮದಲ್ಲಿ ತೊಡಗಿಸಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ.

ಅಲ್ಲದೆ, ರಾಮನಗರದ ರೇಷ್ಮೆ ಮಾರುಕಟ್ಟೆ ಏಷ್ಯಾದಲ್ಲಿಯೇ ಪ್ರಥಮ ಮಾರುಕಟ್ಟೆ ಎನ್ನುವ ಬಿರುದು ಪಡೆದಿದೆ. ಇದರ ಜತೆಗೆ ಚನ್ನಪಟ್ಟಣ, ಕನಕಪುರದಲ್ಲಿಯೂ ಮಾರುಕಟ್ಟೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ದಿನ ಸರಾಸರಿ 15-20 ಟನ್​ ರೇಷ್ಮೆಗೂಡು ರಾಮನಗರ ಜಿಲ್ಲೆ ಒಂದರಿಂದಲೇ ಉತ್ಪಾದನೆ ಆಗುತ್ತಿದೆ.

ಹೀಗೆ ರೇಷ್ಮೆ ಉತ್ಪಾದನೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ರಾಮನಗರ ಜಿಲ್ಲೆಯಲ್ಲಿ ಅಷ್ಟೇ ಸಮಸ್ಯೆಗಳೂ ಇವೆ.

ಮಾರುಕಟ್ಟೆಯಲ್ಲಿ ಉತ್ತಮ ವಾತಾವರಣ ಇಲ್ಲದಿರುವುದು, ಹಿಪು$್ಪ ನೇರಳೆ ತೋಟದಲ್ಲಿ ಎಲೆ ಸುರಳಿ ರೋಗ, ಥ್ರಿಪ್ಸ್​ ರೋಗ, ರೇಷ್ಮೆ ಹುಳುಗಳಿಗೆ ಸುಣ್ಣಕಟ್ಟು ಸೇರಿ ವಿವಿಧ ರೋಗಳಿಂದ ಇಳುವರಿ ಕುಂಠಿತವಾಗುತ್ತಿದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಸ್ಥಳಿಯ ಅಧಿಕಾರಿಗಳು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರಾದರೂ ಲಸಿಗುತ್ತಿಲ್ಲ. ನಷ್ಟ ಪರಿಹಾರ ಕೊಡಿಸುವ ಕೆಲಸ ಅಧಿಕಾರಿಗಳ ಕೈಯಿಂದ ಸಾಧ್ಯವಾಗದ ಕಾರಣ ಸಮಸ್ಯೆಗಳನ್ನು ಸರ್ಕಾರದ ಪ್ರತಿನಿಧಿ ಮುಂದೆಯೇ ಹೇಳಿಕೊಳ್ಳಬೇಕು. ಆದರೆ, ಸಚಿವರು ಮಾತ್ರ ಒಂದು ವರ್ಷ ಕಳೆದರೂ ಜಿಲ್ಲೆಯತ್ತ ಬಂದೇ ಇಲ್ಲ.

ಇಲಾಖೆ ಕಾರ್ಯ ಭಾರವೇ?

ಸಚಿವ ಕೆ.ವೆಂಕಟೇಶ್​ ಅವರಿಗೆ ಇಲಾಖೆಯಲ್ಲಿ ಕಾರ್ಯದೊತ್ತಡ ಇದೆಯೇ?, ಪಶುಸಂಗೋಪನೆ, ರೇಷ್ಮೆ ಇಲಾಖೆಗಳ ಜತೆಗೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿ ನೀಡಲಾಗಿದೆ. ಈ ಇಲಾಖೆಗಳ ಕಾರ್ಯದೊತ್ತಡ ಹೆಚ್ಚಿದೆಯೇ. ಇಲ್ಲ ಜವಾಬ್ದಾರಿ ಮರೆತಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದೆ.

ಮೈಸೂರು ಮತ್ತು ಚಾಮರಾಜನಗರಕ್ಕೆ ರಾಮನಗರ ಜಿಲ್ಲೆಯನ್ನು ದಾಟಿಯೇ ಹೋಗಬೇಕು. ಬೆಂಗಳೂರಿನಿಂದ ಚಾಮರಾಜನಗರಕ್ಕೆ ಹೋಗಲು ಕನಕಪುರ ಮಾರ್ಗ, ಮೈಸೂರಿಗೆ ರಾಮನಗರ ಮಾರ್ಗವಾಗಿಯೇ ತೆರಳಬೇಕು. ಈ ದಾರಿ ಮಧ್ಯದಲ್ಲಿ ಒಮ್ಮೆಯಾದರೂ ಜಿಲ್ಲೆಯ ರೈತರೊಂದಿಗೆ ಚರ್ಚೆಯನ್ನಾದರೂ ಮಾಡಬೇಕಿತ್ತು. ಕಳೆದ ವರ್ಷ ಬರ ಪರಿಸ್ಥಿತಿ ನಿರ್ಮಾಣವಾದಾಗಲೂ ಸಹ ರೇಷ್ಮೆ ಕೃಷಿಕರ ಸಮಸ್ಯೆ ಆಲಿಸಲೇ ಇಲ್ಲ.

ಅಧಿಕಾರಿಗಳು ನಿರುತ್ತರ?

ಸಚಿವರು ರಾಮನಗರ ಜಿಲ್ಲೆಗೆ ಏಕೆ ಬಂದಿಲ್ಲ ಎನ್ನುವ ಪ್ರಶ್ನೆಯನ್ನು ರೇಷ್ಮೆ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಅವರು ನಿರುತ್ತರರಾಗುತ್ತಾರೆ. ಒಮ್ಮೆ ಬರುವುದಾಗಿ ಹೇಳಿದ್ದರು. ಆದರೆ ಈ ಅದು ರದ್ದಾಯಿತು. ಅವರು ಬಾರದಿರುವ ಬಗ್ಗೆ ನಾವು ಪ್ರಶ್ನೆ ಮಾಡುವುದಾರೂ ಹೇಗೆ ಎನ್ನುವ ಮರು ಪ್ರಶ್ನೆಯನ್ನು ಹಾಕುತ್ತಾರೆ.

ಸಚಿವರೇ ಜಿಲ್ಲೆಗೆ ಬನ್ನಿ

ಮಿಲ್ಕು ಸಿಲ್ಕಿನ ಮೂಲಕವೇ ಹೆಸರು ಮಾಡಿರುವ ರಾಮನಗರ ಜಿಲ್ಲೆ ಬೆಂಗಳೂರಿನಿಂದ ದೂರವೇನು ಇಲ್ಲ. ಮೈಸೂರಿಗೆ ಹೋಗುವ ದಾರಿಯಲ್ಲಿಯೇ ಇದ್ದು, ಒಮ್ಮೆಯಾದರೂ ರೇಷ್ಮೆ ಮಾರುಕಟ್ಟೆಗೆ ಬೇಟಿ ಕೊಟ್ಟು, ಇಲ್ಲಿನ ರೈತರ ಸಮಸ್ಯೆಗಳನ್ನು ಆಲಿಸಿ. ಇದರ ಜತೆಗೆ ಕಳೆದ ಎರಡು ವರ್ಷಗಳಿಂದಲೂ ರೈತರಿಗೆ ಇಲಾಖೆಯಿಂದ ನೀಡಲಾಗುತ್ತಿದ್ದ ಸೌಲಭ್ಯಗಳು ಇಲ್ಲದಾಗಿದ್ದು, ಇದರ ಪರಿಹಾರಕ್ಕೆ ಗಮನ ಹರಿಸಿ.

ಹೊಸ ಸರ್ಕಾರ ರಚನೆಯಾಗಿ 15 ತಿಂಗಳು ಆಗಿದೆ. ಈವರೆವಿಗೂ ಜಿಲ್ಲೆಗೆ ರೇಷ್ಮೆ ಮತ್ತು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್​ ಅವರು ಬರಲೇ ಇಲ್ಲ. ಸಿಲ್ಕು ಮತ್ತು ಮಿಲ್ಕು ಉದ್ಯಮದಲ್ಲಿ ಸಾಕಷ್ಟು ಸಮಸ್ಯೆ ಇದ್ದು, ಸಚಿವರು ಜಿಲ್ಲೆಗೆ ಬಂದು ನಮ್ಮ ಕಷ್ಟ ಆಲಿಸಲಿ. > ಕೆ.ರವಿರೇಷ್ಮೆ ಬೆಳಗಾರರ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net