ಶಾಲಾ ವಾಹನ-KKRTC ಬಸ್​ ಅಪಘಾತಕ್ಕೆ ಕಾರಣವಾಯ್ತ ರಸ್ತೆ ಗುಂಡಿ! ಪ್ರತ್ಯಕ್ಷದರ್ಶಿಗಳು ಹೇಳಿದ್ದಿಷ್ಟು

Raichur Accident
Published on

ರಾಯಚೂರು: ಶಿಕ್ಷಕರ ದಿನಾಚರಣೆ ಪ್ರಯುಕ್ತ ತಮ್ಮ ನೆಚ್ಚಿನ ಟೀಚರ್​ಗೆ ವಿಷ್​ ಮಾಡಬೇಕೆಂದು ಖುಷಿ ಖುಷಿಯಿಂದ ಹೊರಟಿದ್ದ ಮಕ್ಕಳ ಹಣೆಯಲ್ಲಿ ವಿಧಿಯಾಟ ಬೇರೆಯದ್ದೇ ಇತ್ತು. ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಕಪಗಲ್​ ಗ್ರಾಮದ ಬಳಿ ಶಾಲಾ ವಾಹನ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, 17 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಮೂವರು ಮಕ್ಕಳ ಕಾಲುಗಳು ಕಟ್​ ಆಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಎಂದಿನಂತೆ ಇಂದು (ಸೆಪ್ಟೆಂಬರ್​ 05) ಕೂಡ ಲೊಯೋಲಾ ಶಾಲೆಯ ವ್ಯಾನ್ ಮಾನ್ವಿ ಸುತ್ತಲಿನ ಕಪಗಲ್,ಕುರ್ಡಿ ಸೇರಿದಂತೆ ವಿವಿಧ ಹಳ್ಳಿಗಳಿಂದ ಮಕ್ಕಳನ್ನು ಪಿಕ್​ ಮಾಡಿಕೊಂಡು ಹೊರಟಿತ್ತು. ಈ ವೇಳೆ ಮಾನ್ವಿ ಪಟ್ಟಣದ ಮಾರ್ಗ ಮಧ್ಯೆ ಕಪಗಲ್ ಬಳಿ ಶಾಲಾ ಬಸ್ ಹಾಗೂ ರಾಯಚೂರು ಮಾರ್ಗವಾಗಿ ಹೊರಟಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ನಡುವೆ ಡಿಕ್ಕಿಯಾಗಿದೆ‌. ಅಪಘಾತದ ಹೊಡೆತಕ್ಕೆ ಶಾಲಾ ಬಸ್ ಮುಂಭಾಗ ಛಿದ್ರಛಿದ್ರವಾಗಿದ್ದು, ಬಸ್​ ಹಾಗೂ ವ್ಯಾನ್​ನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿವೆ.

ಈ ಭೀಕರ ಅಪಘಾತಕ್ಕೆ ಮುಖ್ಯ ಕಾರಣ ಎಂದರೆ ಅದು ರಸ್ತೆ ಗುಂಡಿ ಎಂದು ಹೇಳಲಾಗಿದೆ. ರಾಯಚೂರಿನಿಂದ ಸಿಂಧನೂರಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯೂ ಸಂಪೂರ್ಣ ಗುಂಡಿಗಳಿಂದ ಕೂಡಿದ್ದು, ಪ್ರತಿನಿತ್ಯ ಇಲ್ಲಿ ಅಪಘಾತಗಳು ಸಂಭವಿಸುತ್ತವೆ ಎಂದು ಹೇಳಲಾಗಿದೆ. ಈ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿರುವ ಪ್ರತ್ಯಕ್ಷದರ್ಶಿಗಳು ರಸ್ತೆ ಗುಂಡಿ ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿದ್ದು, ಪ್ರತಿನಿತ್ಯ ವಾಹನ ಸವಾರರು ಒಂದಿಲ್ಲೊಂದು ಕಿರಿಕಿರಿ ಅನುಭವಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಪ್ರತ್ಯಕ್ಷದರ್ಶಿಗಳು ಆಗ್ರಹಿಸಿದ್ದಾರೆ.

Raichur Accident

ಈ ಅಪಘಾತ ಇಡೀ ರಾಯಚೂರು  ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದು,  ಭೀಕರ ಅಪಘಾತದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಹಲವರು Black Day Of Raichur ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ಮೃತ ಮಕ್ಕಳ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದು, ಸಂತಾಪ ಸೂಚಿಸಿದ್ಧಾರೆ.

ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕಪಗಲ್ ಬಳಿ ಶಾಲಾ ಬಸ್ ಮತ್ತು ಸರ್ಕಾರಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಮೃತಪಟ್ಟು, ಹಲವು ಮಕ್ಕಳು ಗಂಭೀರವಾಗಿ ಗಾಯಗೊಂಡ ಸುದ್ದಿ ಕೇಳಿ ಸಂಕಟವಾಯಿತು. ಮೃತ ಕಂದಮ್ಮಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಘಟನೆಯಲ್ಲಿ ಗಾಯಗೊಂಡ ಮಕ್ಕಳಿಗೆ ಉಚಿತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗುವುದು, ಮೃತ ಮಕ್ಕಳ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರವನ್ನು ನೀಡಲಾಗುವುದು. ಮಕ್ಕಳನ್ನು ಕಳೆದುಕೊಂಡ ಪೋಷಕರ ದುಃಖದಲ್ಲಿ ನಾನೂ ಭಾಗಿ ಎಂದು ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net