ಬಿಜೆಪಿಗರ ಅಪಪ್ರಚಾರಕ್ಕೆ ಕಿವಿಗೊಡಬೇಡಿ

08-GPT-2
Published on

ಗುಂಡ್ಲುಪೇಟೆ: ಕಾಂಗ್ರೆಸ್ ಸರ್ಕಾರ ಯಾವುದೇ ಜನಾಂಗಗಳನ್ನೂ ನಿರ್ಲಕ್ಷಿಸದೆ ಸಹಾಯ ಮಾಡುತ್ತಿದ್ದು, ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಎಂದು ಶಾಸಕ ಎಚ್.ಎಂ.ಗಣೇಶ ಪ್ರಸಾದ್ ಮನವಿ ಮಾಡಿದರು.


ನಿಟ್ರೆ, ಚಿಕ್ಕಾಟಿ, ಬೇಗೂರು ಗ್ರಾಮಗಳಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರದ ಎಲ್ಲ ಯೋಜನೆಗಳನ್ನು ಎಲ್ಲ ಜನಾಂಗಗಳಿಗೂ ಸಮಾನವಾಗಿ ಒದಗಿಸಲಾಗುತ್ತಿದೆ. ಗುಂಡ್ಲುಪೇಟೆ ಒಂದರಲ್ಲಿಯೇ ಗೃಹಜ್ಯೋತಿ ಯೋಜನೆಯಲ್ಲಿ 7 ಕೋಟಿ ರೂ. ಮನ್ನಾ ಮಾಡಲಾಗಿದೆ. ಹಿಂದೆ ದಿ.ಮಹದೇವಪ್ರಸಾದ್ ಮತ್ತು ಆರ್.ಧ್ರುವನಾರಾಯಣ ಅವರ ದೂರದೃಷ್ಟಿಯಿಂದ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. 2013ರಲ್ಲಿ ಸಿದ್ದರಾಮಯ್ಯ ಅವರು ಕ್ಷೇತ್ರಕ್ಕೆ ಮಂಜೂರು ಮಾಡಿದ್ದ ಅಭಿವೃದ್ಧಿ ಕಾರ್ಯಗಳನ್ನೇ ಇನ್ನೂ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು.


ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಿಜೆಪಿ ಲೋಕಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಸುಳ್ಳು ಹೇಳುತ್ತಿದ್ದು ಜನತೆ ಅವರ ಅಪಪ್ರಚಾರಕ್ಕೆ ಕಿವಿಗೊಡದೆ ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿನ ಮತ ನೀಡಿ. ಏ.12ರಂದು ನಂಜನಗೂಡು ಗಡಿಯ ಕಳಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಪರ ಚುನಾವಣೆ ಪ್ರಚಾರ ಸಭೆ ನಡೆಸಲಿದ್ದು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.


ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್ ಮಾತನಾಡಿ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯು ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಶಾಸಕರೇ ಅಧಿಕಾರದಲ್ಲಿದ್ದಾರೆ. ದಿ.ಮಹದೇವಪ್ರಸಾದ್ ಮತ್ತು ದಿ.ಧ್ರುವನಾರಾಯಣ ಅವರ ಅವಧಿಯಲ್ಲಿ ಅತ್ಯಂತ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಆದ್ದರಿಂದ ಈ ಬಾರಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಅಭಿವೃದ್ಧಿ ಕಾರ್ಯಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.


ಟಿಎಪಿಸಿಎಂಎಸ್ ಅಧ್ಯಕ್ಷ ಆಲತ್ತೂರು ಜಯರಾಂ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಪಂ ಮಾಜಿ ಸದಸ್ಯರಾದ ಬಿ.ಎಂ.ಮುನಿರಾಜು, ಕೆರೆಹಳ್ಳಿ ನವೀನ್, ಶಿವಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಮಾಜಿ ಸದಸ್ಯ ನೀಲಕಂಠಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net