

ಶಿರ್ವ: ಬಂಟಕಲ್ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಆರೋನ್ ಶರೋನ್ ಡಿಸೋಜ, ದೃಶ್ಯ ಶೆಟ್ಟಿ, ಮಿಸ್ಬಾ ಬಾನು ಮುನೀರ್ ಮತ್ತು ಪೀಟರ್ ಕೇಟಾನೋ ಜೋವೋ ಅವರು ಗಣಕಯಂತ್ರ ವಿಭಾಗದ ಪ್ರಾಧ್ಯಾಪಕಿ ಚೈತ್ರಾ ಮಾರ್ಗದರ್ಶನದಲ್ಲಿ ಎರಡು ವಿಭಿನ್ನ ವಿಧಾನ ಬಳಸಿ ಮಧುಮೇಹ ಪೂರ್ವಭಾವಿ ಪತ್ತೆ ಹಾಗೂ ಅದನ್ನು ನಿಯಂತ್ರಿಸುವ ವೆಬ್‌ಸೈಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.
ಈ ವೆಬ್‌ಸೈಟ್‌ನಲ್ಲಿ ಎರಡೂ ವಿಧಾನಗಳಲ್ಲಿ ಮಧುಮೇಹ ಪತ್ತೆ ಹಚ್ಚಬಹುದು. ಒಂದು ಉಪವಾಸ ಮತ್ತು ರಕ್ತದ ಸಕ್ಕರೆಮಟ್ಟವನ್ನು ಆಧರಿಸಿ, ಇನ್ನೊಂದು ಗ್ಲೂಕೋಸ್ ಮಟ್ಟ, ರಕ್ತದೊತ್ತಡ ಮತ್ತು ವಯಸ್ಸನ್ನು ಆಧರಿಸಿ ಮಧುಮೇಹ ಪತ್ತೆ ಹಚ್ಚುವುದಾಗಿದೆ. ಈ ವ್ಯವಸ್ಥೆ ಬಳಸುವ ವ್ಯಕ್ತಿಗೆ ಮಧುಮೇಹದ ಸ್ಥಿತಿಗೆ ಅನುಗುಣವಾಗಿ ಆಹಾರ ಪದ್ಧತಿ, ಆರೋಗ್ಯ ನಿರ್ವಹಣೆ ಬಗ್ಗೆ ಮಾಹಿತಿ ತಿಳಿದುಕೊಂಡು ತಮ್ಮ ಆರೋಗ್ಯಕ್ಕೆ ಅನುಗುಣವಾಗಿ ಜೀವನಶೈಲಿ ಬದಲಾಯಿಸಿಕೊಳ್ಳಲು ಸಹಕಾರಿಯಾಗಿದೆ.
ಸಂಸ್ಥೆ ಆಡಳಿತ ಮಂಡಳಿ, ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್, ಗಣಕಯಂತ್ರ ವಿಭಾಗದ ಮುಖ್ಯಸ್ಥೆ ಡಾ.ಸೌಮ್ಯಾ ಜೆ.ಭಟ್ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.