

ಹಾಸನ: ಕ್ರೀಡಾ ಲೋಕದ ಸ್ಫೂರ್ತಿದಾಯಕ ವ್ಯಕ್ತಿತ್ವದವರಾಗಿರುವ ಮೇಜರ್ ಧ್ಯಾನ್ ಚಂದ್ ಅವರ ಕ್ರೀಡಾ ಸ್ಫೂರ್ತಿ ಪ್ರತಿಯೊಬ್ಬ ಕ್ರೀಡಾಪಟುಗಳಿಗೆ ಆದರ್ಶವಾದದು ಎಂದು ಟೈಮ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಹಾಗೂ ಟೈಮ್ಸ್ ಸ್ಪೋರ್ಟ್ಸ್ ಅಕಾಡೆಮಿ ಮುಖ್ಯಸ್ಥ ಬಿ.ಕೆ. ಗಂಗಾಧರ್ ಹೇಳಿದರು.
ನಗರದ ವಿಜಯನಗರ ಬಡಾವಣೆಯಲ್ಲಿರುವ ಟೈಮ್ಸ್ ಅಂತಾರಾಷ್ಟ್ರೀಯ ಶಾಲೆ ಆವರಣದಲ್ಲಿ ಶುಕ್ರವಾರ ಟೈಮ್ಸ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ಮೇಜರ್ ಧ್ಯಾನ್ ಚಂದ್ ಅವರ ಜನ್ಮ ದಿನಾಚರಣೆ ಸ್ಮರಣಾರ್ಥ ವಿಶ್ವ ಕ್ರೀಡಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧ್ಯಾನ್ ಚಂದ್ ಅವರು ಒಲಿಂಪಿಕ್ಸ್‌ನಲ್ಲಿ ನಮ್ಮ ದೇಶಕ್ಕೆ ಮೂರು ಬಾರಿ ಚಿನ್ನದ ಪದಕ ತಂದುಕೊಟ್ಟ ಶ್ರೇಷ್ಠ ಆಟಗಾರ. ಹಾಕಿ ಆಟದ ಮೇಲೆ ಅವರ ಹಿಡಿತ ಹೇಗಿತ್ತು ಎಂಬುವುದಕ್ಕೆ ಅವರ ಆಟವನ್ನು ವೀಕ್ಷಿಸಿದವರಿಗೆ ಅರಿವಾಗುತ್ತದೆ. ಹಾಕಿ ಸ್ಟಿಕ್‌ನೊಂದಿಗೆ ಚೆಂಡು ಅಂಟಿಕೊಂಡಿರುತ್ತಿತ್ತೇನೊ ಎಂಬುವಷ್ಟು ಅವರ ಆಟ ಸೊಗಸಾಗಿರುತ್ತಿತ್ತು. ರಾತ್ರಿ ವೇಳೆ ಚಂದ್ರನ ಬೆಳಿಕಿನಲ್ಲಿ ಆಟವನ್ನು ಆಡುತ್ತಿದ್ದ ಅವರನ್ನು ಅವರ ಗೆಳೆಯರು ಧ್ಯಾನ್ ಚಂದ್ ಎಂದು ಕರೆದರು. ಹಾಕಿ ಕ್ರೀಡೆಯಲ್ಲಿ ಅಷ್ಟೆಲ್ಲಾ ಸಾಧನೆ ಮಾಡಿದ್ದರೂ ಅವರು ಕೊನೆಯ ದಿನಗಳಲ್ಲಿ ಬಡತನದಲ್ಲಿಯೇ ಮೃತರಾದರು. ಆದರೆ ಇಂದು ಆ ರೀತಿಯ ಪರಿಸ್ಥಿತಿ ಇಲ್ಲ. ಯಾವುದೇ ಒಬ್ಬ ಆಟಗಾರ ಒಂದು ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರೆ ಬೆಳಗ್ಗೆ ಆಗುವಷ್ಟರಲ್ಲಿ ಸ್ಟಾರ್ ಆಗಿ ಹೊರಹೊಮ್ಮುತ್ತಾನೆ ಎಂದು ಹೇಳಿದರು.
ಧ್ಯಾನ್ ಚಂದ್ ಅವರು ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಣೆ ಮಾಡಿಕೊಂಡು ಹಾಕಿ ಕ್ರೀಡೆಯಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಹಾಕಿ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಇವರ ಹಾಕಿ ಕ್ರೀಡೆಯ ಮೇಲಿನ ಆಸಕ್ತಿ ಕಂಡು ಇವರನ್ನು 1926ರಲ್ಲಿ ಭಾರತೀಯ ಹಾಕಿ ತಂಡಕ್ಕೆ ಆಯ್ಕೆ ಮಾಡಲಾಯಿತು. ಇವರು ಸುಮಾರು 400ಕ್ಕೂ ಅಧಿಕ ಗೋಲುಗಳನ್ನು ಗಳಿಸಿದ್ದಾರೆ ಎಂದು.
ಹಾಕಿ ಕ್ರೀಡೆಯಲ್ಲಿನ ಧ್ಯಾನ್‌ಚಂದ್ ಅವರ ಸಾಧನೆ ಮನಗಂಡು ಅನೇಕ ದೇಶಗಳು ಇವರನ್ನು ಗೌರವದಿಂದ ಕಂಡಿದ್ದು, ಲಂಡನ್ನಿನ ಹಾಕಿ ಕ್ರೀಡಾಂಗಣಕ್ಕೆ ಧ್ಯಾನ್ ಚಂದ್ ಹೆಸರನ್ನು ಇರಿಸಲಾಗಿದೆ. ನಮ್ಮ ದೇಶದಲ್ಲಿ ಇವರ ಗೌರವಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಇವರ ಹೆಸರಿನಲ್ಲಿ ರಾಷ್ಟ್ರೀಯ ಕ್ರೀಡಾಂಗಣ, ರಾಜೀವ್ ಗಾಂಧಿ ಖೇಲ್ ರತ್ನ, ಅರ್ಜುನ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಗಿದ್ದು, ನಮ್ಮ ರಾಜ್ಯ ಸರ್ಕಾರ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಅವರ ಹೆಸರಿನಲ್ಲಿ ವಿಶ್ವ ಕ್ರೀಡಾ ದಿನಾಚರಣೆ ಮಾಡುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದರು.
ಟೈಮ್ಸ್ ಸ್ಪೋರ್ಟ್ಸ್ ಅಕಾಡೆಮಿ ಸಂಯೋಜಕ ರಮೇಶ್, ದೈಹಿಕ ಶಿಕ್ಷಣ ಶಿಕ್ಷಕ ದರ್ಶನ್, ಕ್ರಿಕೆಟ್ ತರಬೇತುದಾರ ವಿನಯ್, ಫುಟ್‌ಬಾಲ್ ತರಬೇತುದಾರ ತೇಜು ಇತರರು ಹಾಜರಿದ್ದರು.