

ಬಿಡದಿ : ರಾಜ್ಯದಲ್ಲಿನ ಭ್ರಷ್ಟ ಕಾಂಗ್ರೆಸ್ ಸರ್ಕಾರ ಕೆಡವಲು ಬಿಜೆಪಿ ಜತೆಗೆ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಕೇತುಗಾನಹಳ್ಳಿಯ ತೋಟದ ಮನೆಯಲ್ಲಿ ಭಾನುವಾರ ಜೆಡಿಎಸ್ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು ಮತ್ತು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಜತೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಶಾಸಕರೇ ಕ್ಷೇತ್ರದ ಅಭಿವೃದ್ಧಿಗೆ ಹಣವಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಈ ಸರ್ಕಾರವನ್ನು ಕೆಡವಲು ಬಿಜೆಪಿಯೊಂದಿಗೆ ಸಹಕಾರ ಮಾಡಬೇಕಾಗಿದೆ ಎಂದರು.
ಜೆಡಿಎಸ್ ಎಂದಿಗೂ ಸಂಘಟನೆ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ದೇವೇಗೌಡರು ಮುಖ್ಯಮಂತ್ರಿ ಆದರು, ನಂತರ ಪ್ರಧಾನಿ ಆದರು. ಈಗ 2023ರ ಚುನಾವಣೆಯಲ್ಲಿ ಕೇವಲ 18 ಸ್ಥಾನ ಗೆದ್ದಿದ್ದರೂ ನಾನು ಕೇಂದ್ರ ಸಚಿವನಾಗಿದ್ದೇನೆ. ಪ್ರಧಾನಿ ಮೋದಿ ಅವರು ಹೆಮ್ಮೆ ಪಡುವಂತೆ ಕೆಲಸ ಮಾಡಬೇಕೆಂದು ನನಗೆ ಮಾರ್ಗದರ್ಶನ ನೀಡಿ ಸಚಿವ ಸ್ಥಾನದ ಜವಾಬ್ದಾರಿ ನೀಡಿದ್ದಾರೆ ಎಂದು ಹೇಳಿದರು.
ಪಕ್ಷ ಬಲವರ್ಧನೆ ಮತ್ತು ಸಂಘಟನೆ ದೃಷ್ಟಿಯಿಂದ ರಾಜ್ಯಾದ್ಯಂತ ಮತ್ತೆ ಸದಸ್ಯತ್ವ ನೋಂದಣಿ ಪುನರಾರಂಭವಾಗಬೇಕು ಎಂದು ಸಚಿವರು ಪಕ್ಷದ ಮುಖಂಡರಿಗೆ ಸೂಚನೆ ನೀಡಿದರು.
ಈಗಾಗಲೇ ರಾಜ್ಯದಲ್ಲಿ ಜೆಡಿಎಸ್ ಸದಸ್ಯತ್ವ ಮಾಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಇನ್ನೂ ಹಲವು ಬೂತ್‌ಗಳಲ್ಲಿ ಸದಸ್ಯತ್ವ ನೋಂದಣಿಗೆ ಚಾಲನೆ ಆಗಬೇಕು. ಕೆಲವು ಜಿಲ್ಲೆಗಳಲ್ಲಿ ಸದಸ್ಯತ್ವದ ಚಾಲನೆ ನಿಂತಿದೆ, ಅದನ್ನು ಮತ್ತೆ ಆರಂಭಿಸಬೇಕು ಎಂದು ತಿಳಿಸಿದರು.
ನಿಖಿಲ್ ನನ್ನ ಮಗನಾಗಿರುವುದರಿಂದ ನಾನು ಅವನ ಬಗ್ಗೆ ಮೆಚ್ಚುಗೆ ಮಾತನಾಡುತ್ತಿಲ್ಲ. ಅವನಿಗಿರುವ ಗುಣದ ಬಗ್ಗೆ ಮಾತಾಡುತ್ತೇನೆ. ಇಂದು ನಾನು ಅವರನ್ನು ಪಕ್ಷಕ್ಕೆ ಒಪ್ಪಿಸುತ್ತಿದ್ದೇನೆ. ಅವನಿಗೆ ಮಾರ್ಗದರ್ಶನ ಮಾಡುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು.
ರಾಜ್ಯದ ಹಲವು ಕಡೆಯಿಂದ ಚನ್ನಪಟ್ಟಣಕ್ಕೆ ಬಂದು ನಿಖಿಲ್ ಪರವಾಗಿ ಶ್ರಮಿಸಿದ ಎಲ್ಲ ಕಾರ್ಯಕರ್ತರು, ಮುಖಂಡರಿಗೆ ಧನ್ಯವಾದ ತಿಳಿಸಿದರು.
ಕಾರ್ಯಕರ್ತರಿಗೋಸ್ಕರ ಇರುವುದು ಜೆಡಿಎಸ್ : ಪಕ್ಷದಲ್ಲಿ ಅಸಮಾಧಾನಗಳಿದ್ದರೆ ಅವನ್ನು ಬಗೆಹರಿಸಿಕೊಳ್ಳೋಣ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಗೆಲ್ಲಬೇಕಿದೆ. ಕಾರ್ಯಕರ್ತರಿಗೋಸ್ಕರ ಇರುವ ಪಕ್ಷ ಜೆಡಿಎಸ್. ಜಾತಿ ರಾಜಕಾರಣದಲ್ಲಿ ನಮಗೆ ನಂಬಿಕೆ ಇಲ್ಲ. ಎಲ್ಲ ಸಮುದಾಯಗಳನ್ನೂ ನಮ್ಮೊಂದಿಗೆ ಕೊಂಡೊಯ್ಯಲು ಬದ್ಧರಾಗಿದ್ದೇವೆ. ನಾವು ಒಗ್ಗಟ್ಟಿನಿಂದ ಇದ್ದರೆ, ಪಕ್ಷವನ್ನು ಯಾವುದೇ ಶಕ್ತಿಗಳು ಅಂತ್ಯಗೊಳಿಸಲಾರವು ಎಂದು ಕೇಂದ್ರ ಸಚಿವರು ಮುಖಂಡರಿಗೆ ಧೈರ್ಯ ತುಂಬಿದರು.
ರಾಜ್ಯ ಪ್ರವಾಸ ಶೀಘ್ರ : ರಾಮನಗರ ಜಿಲ್ಲೆ ನಮಗೆ ರಾಜಕೀಯ ಜೀವನ ನೀಡಿದೆ. ನನ್ನ ಜೀವನವೇ ಹೋರಾಟ. ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವವರ ಬಗ್ಗೆ ಹಗುರವಾಗಿ ಮಾತನಾಡಿಲ್ಲ. ಮುಂದಿನ ಸಾರ್ವತ್ರಿಕ ಚುನಾವಣೆಗೆ ಸಿದ್ಧರಾಗಬೇಕು. ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ನಾನು ಶಾಸಕನಾಗಬೇಕು ಎನ್ನುವುದು ನನ್ನ ಮುಂದೆ ಇರುವ ಪ್ರಶ್ನೆ ಅಲ್ಲ, ಪ್ರಾದೇಶಿಕ ಪಕ್ಷ ಉಳಿಯಬೇಕಿದೆ, ಕನ್ನಡಿಗರ ಅಸ್ಮಿತೆಗಾಗಿ ಈ ಪಕ್ಷ ಉಳಿಯಬೇಕಿದೆ. ಆ ಹಿನ್ನೆಲೆಯಲ್ಲಿ ಹೋರಾಟ ಮಾಡುತ್ತೇನೆ. ಹೋರಾಟ ಎನ್ನುವುದನ್ನು ರಕ್ತಗತವಾಗಿ ಮೈಗೂಡಿಸಿಕೊಂಡಿದ್ದೇನೆ. ಹಲವು ಸಂದರ್ಭದಲ್ಲಿ ಅಖಾಡ ಸಿದ್ಧವಾಗಿತ್ತು, ಬಹಳ ಸುಲಭವಾಗಿ ಶಾಸಕನಾಗಬಹುದಿತ್ತು. ಆದರೆ, ಇಲ್ಲಿಯವರೆಗೂ ಪಕ್ಷ ಸಂಕಷ್ಟದಲ್ಲಿತ್ತು, ಆ ಸಂದರ್ಭದಲ್ಲಿ ಪಕ್ಷದ ಶಿಸ್ತಿನ ಸಿಪಾಯಿಯಾಗಿ, ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ಇಡೀ ರಾಜ್ಯ ಪ್ರವಾಸ ಮಾಡುತ್ತೇನೆ. ಮೂಲೇಲಿ ಕೂರುವ ಜಾಯಮಾನ ನನ್ನದಲ್ಲ ಎಂದು ಹೇಳಿದರು.
ರೈತರ ಜತೆಗೆ ಸಭೆ : ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ, ಹುಣಸೂರು ಹಾಗೂ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ತಂಬಾಕು ಬೆಳೆಗೆ ಸೂಕ್ತ ಬೆಂಬಲ ಬೆಲೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದೇವೆ. ನಮಗೆ ಸೂಕ್ತ ಬೆಂಬಲ ಕೊಡಿಸಿ ಎಂದು ಕೇಂದ್ರ ಸಚಿವರಿಗೆ ರೈತರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಎಚ್‌ಡಿಕೆ ಸಂಬಂಧಿಸಿ ಸಚಿವರ ಜತೆ ಮಾತನಾಡುವ ಭರವಸೆಯನ್ನು ರೈತರಿಗೆ ನೀಡಿದ್ದಾರೆ.
ಶಾರದಾ ಪೂರ್ಯ ನಾಯಕ, ಲೀಲಾದೇವಿ ಪ್ರಸಾದ್, ಎಂ.ಟಿ. ಕೃಷ್ಣಪ್ಪ, ರಮೇಶ್ ಗೌಡ, ತಿಪ್ಪೇಸ್ವಾಮಿ, ನಾಗರಾಜಯ್ಯ ಸೇರಿ ಹಲವು ನಾಯಕರು ಇದ್ದರು.