ಸತ್ತವರ ಕುಟುಂಬಕ್ಕೆ ಇನ್ನಷ್ಟು ನೋವು ಕೊಡುತ್ತಿದೆ ಸೋಶಿಯಲ್​ ಮೀಡಿಯಾ!

accident
Published on

ಧಾರವಾಡ: ದಾವಣಗೆರೆಯ ಬಾಲ್ಯ ಸ್ನೇಹಿತೆಯರು ಧಾರವಾಡದ ಇಟಿಗಟ್ಟಿಯ ಬಳಿ ಅಪಘಾತದಿಂದಾಗಿ ಮೃತರಾಗಿ ಮೂರ್ನಾಲ್ಕು ದಿನಗಳು ಕಳೆದಿವೆ. ಆದರೆ ಅಪಘಾತದ ಚಿತ್ರಗಳು, ವಿಡಿಯೋಗಳು ಫೇಸ್ ಬುಕ್‌ನಲ್ಲಿ ಇನ್ನೂ ಹರಿದಾಡುತ್ತಲೇ ಇವೆ. ಛಿದ್ರಗೊಂಡಿರುವ ದೇಹದ ಚಿತ್ರಗಳು ಸೋಶಿಯಲ್​ ಮೀಡಿಯಾ ವಾಲ್​ಗಳಲ್ಲಿ ಕಾಣಿಸಿಕೊಳ್ಳುತ್ತಲಿವೆ. ಈಗಾಗಲೇ ಕುಟುಂಬದ ಸದಸ್ಯರನ್ನು ಕಳೆದುಕೊಂಡು ನೋವಿನಲ್ಲಿರುವ ಕುಟುಂಬಸ್ಥರಿಗೆ ಈ ಫೋಟೋಗಳಿಂದಾಗಿ ಮತ್ತೆ ಮತ್ತೆ ಅವರ ನೆನಪು ಮರುಕಳಿಸುವಂತಾಗಿದೆ.

ರಸ್ತೆ ಅಪಘಾತದಲ್ಲಿ ಮೃತಪಟ್ಟವರು ಗೋವಾ ಪ್ರವಾಸ ಹೊರಟಿದ್ದರು ಎಂಬ ಕಾರಣಕ್ಕೆ ಅವರ ವಿರುದ್ಧ ಕೀಳು ಮಟ್ಟದ ಕಮೆಂಟ್‌ಗಳನ್ನು ಹಾಕಲಾಗುತ್ತಿದೆ. ಇಂತಹ ಪೋಸ್ಟ್‌ಗಳನ್ನು ನೋಡಿ ಕುಟುಂಬದವರು ಆಕ್ರೋಶಗೊಂಡಿದ್ದಾರೆ. ಸಾವಿನ ದುಃಖ ಒಂದು ಕಡೆಯಾದರೆ, ಇಂತಹ ಪೋಸ್ಟ್‌ಗಳು ಕುಟುಂಬದವರಿಗೆ ನೋವು ತಂದಿವೆ. ಈ ರೀತಿ ಪೋಸ್ಟ್​, ಕಮೆಂಟ್​ ಮಾಡುತ್ತಿರುವವರ ಬಗ್ಗೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲ್ಯ ಸ್ನೇಹಿತೆಯರು ಒಟ್ಟಾಗಿ ಗೋವಾ ಪ್ರವಾಸ ಹೋಗುವ ಯೋಜನೆ ಒಂದು ತಿಂಗಳ ಮೊದಲೇ ಆಗಿತ್ತು. ಆದರೆ, ಮಕ್ಕಳ ಪರೀಕ್ಷೆ ಮತ್ತು ವಿವಿಧ ಕಾರಣಗಳಿಂದಾಗಿ ಒಂದಿಬ್ಬರು ಅಂದು ಪ್ರವಾಸ ಹೊರಟಿರಲಿಲ್ಲ.

ಧಾರವಾಡ ತಾಲೂಕಿನ ಇಟಿಗಟ್ಟಿ ಬಳಿ ಶುಕ್ರವಾರ ಮುಂಜಾನೆ ಟ್ರಕ್ ಮತ್ತು ಟೆಂಪೋ ಟ್ರಾವೆಲರ್ ಮುಖಾಮುಖಿ ಡಿಕ್ಕಿಯಾಗಿ 13 ಜನರು ಮೃತರಾಗಿದ್ದರು. ಮೃತಪಟ್ಟವರೆಲ್ಲರೂ ದಾವಣಗೆರೆ ಮೂಲದವರಾಗಿದ್ದು ಬಾಲ್ಯ ಸ್ನೇಹಿತೆಯರಾಗಿದ್ದರು. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆಯಿಂದ ಗೋವಾ ಪ್ರವಾಸ ಹೊರಟಿದ್ದ 13 ಜನರು ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಅಪಘಾತದಲ್ಲಿ ಮೃತಪಟ್ಟ ಕುಟುಂಬದವರಿಗೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net