ನ್ಯಾಯಬೆಲೆ ಅಂಗಡಿಗಳಿಂದ ಹಣ ವಸೂಲಿ! ಎಸಿಬಿ ದಾಳಿಯಲ್ಲಿ 5.61 ಲಕ್ಷ ರೂ. ಪತ್ತೆ

acb
Published on

ಧಾರವಾಡ: ನ್ಯಾಯಬೆಲೆ ಅಂಗಡಿಗಳಿಂದ ಹಣ ವಸೂಲಿ ಮಾಡುತ್ತಿದ್ದರೆನ್ನಲಾದ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಅಧಿಕಾರಿಯ ಬಳಿಯಿಂದ 5.61 ಲಕ್ಷ ರೂಪಾಯಿ ಲಂಚದ ಹಣ ಪತ್ತೆಯಾಗಿದೆ. ಶನಿವಾರದಂದು ಧಾರವಾಡದಲ್ಲಿ ಸರ್ಕಾರಿ ಕಚೇರಿ ಮತ್ತು ಅಧಿಕಾರಿಯ ನಿವಾಸದ ಮೇಲೆ ಏಕಕಾಲದಲ್ಲೇ ಎಸಿಬಿ ದಾಳಿ ನಡೆದಿದೆ.

ಧಾರವಾಡದ ಆಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಕಚೇರಿ ವ್ಯವಸ್ಥಾಪಕ ಶಿವಶಂಕರ ಹಿರೇಮಠ ಬಳಿ ಹಣ ಪತ್ತೆಯಾಗಿದೆ. ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಕಂಪೌಂಡ್‌ನಲ್ಲಿರುವ ಆಹಾರ ಇಲಾಖೆ ಕಚೇರಿ ಮತ್ತು ಸಿ.ಬಿ.ನಗರದಲ್ಲಿರುವ ಹಿರೇಮಠ ಮನೆಯ ಮೇಲೆ ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಕಚೇರಿಯಲ್ಲಿ 1.15 ಲಕ್ಷ ರೂಪಾಯಿ ಪತ್ತೆಯಾಗಿದ್ದು, ಮನೆಯಲ್ಲಿ 4.46 ಲಕ್ಷ ರೂ. ಪತ್ತೆಯಾಗಿದೆ. ಕಚೇರಿ ವ್ಯವಸ್ಥಾಪಕ ಹಿರೇಮಠ, ನ್ಯಾಯ ಬೆಲೆ ಅಂಗಡಿಗಳಿಂದ ಹಣ ವಸೂಲಿ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net