

ಬೆಳ್ತಂಗಡಿ: ಜೀವನದ ನೆರಳಾಗಿರುವ ಧರ್ಮಸ್ಥಳ ಯೋಜನೆಯ ಬಗ್ಗೆ ಸದಾಕಾಲ ಕೃತಜ್ಞತಾ ಭಾವ ಹೊಂದಿರಬೇಕು ಎಂದು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತಗಾರ ಶಿವಪ್ರಸಾದ ಅಜಿಲ ಹೇಳಿದರು.
ಭಾನುವಾರ ಪಿಲ್ಯ ಶಾಲೆಯಲ್ಲಿ ಪಿಲ್ಯ-ಕುದ್ಯಾಡಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಉದ್ಘಾಟಿಸಿ ಮಾತನಾಡಿ, ಯೋಜನೆಯಿಂದಾಗಿ ಇಂದು ಸ್ವಾವಲಂಬಿ ಜೀವನ ನಡೆಸುವಂತಾಗಿದೆ. ಸಹಾಯ ಪಡೆದರೆ ಸಾಲದು ಅದರ ಸ್ಮರಣೆಯೂ ಅಗತ್ಯ ಎಂದರು.
ಯೋಜನಾಧಿಕಾರಿ ದಯಾನಂದ ಪೂಜಾರಿ ಮಾತನಾಡಿ, ಯೋಜನೆ ಲೇವಾದೇವಿ ಮಾಡುವುದಿಲ್ಲ. ಪರೋಕ್ಷವಾಗಿ ದೇಶದ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ. ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ದೂರದೃಷ್ಟಿ ಯೋಜನೆಯಿಂದಾಗಿ ಸಹಸ್ರಾರು ಮಂದಿ ಸ್ವಾವಲಂಬಿಗಳಾಗಿದ್ದಾರೆ. ಉದ್ಯೋಗಿಗಳಾಗಿದ್ದಾರೆ ಎಂದರು.
ಪಿಲ್ಯ ಒಕ್ಕೂಟದ ಅಧ್ಯಕ್ಷ ಕೃಷ್ಣರಾಜ ಭಟ್ ಅಧ್ಯಕ್ಷತೆ ವಹಿಸಿದ್ದರು. ಯೋಜನೆಯ ಮಾನವ ಸಂಪನ್ಮೂಲ ಯೋಜನಾಧಿಕಾರಿ ಶ್ರೀನಿವಾಸ ಅಳದಂಗಡಿ, ಗ್ರಾ.ಪಂ ಅಧ್ಯಕ್ಷೆ ಸರಸ್ವತಿ, ಡಾ.ಸುಷ್ಮಾ ಎಸ್. ಡೋಂಗ್ರೆ, ಶಾಲಾ ಮುಖ್ಯಶಿಕ್ಷಕಿ ರೀಟಾ ಇಸಬೆಲ್ಲ ಪಿಂಟೋ, ಜನಜಾಗೃತಿ ವಲಯಾಧ್ಯಕ್ಷ ನಾರಾಯಣ ಸಾಲ್ಯಾನ್, ಪಿಲ್ಯ ಹಾಗೂ ಕುದ್ಯಾಡಿ ಒಕ್ಕೂಟದ ನೂತನ ಅಧ್ಯಕ್ಷರಾದ ಶೈಲೇಶ್ ಮತ್ತು ಭಾರತಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಾಟಿ ವೈದ್ಯೆ ಬೇಬಿ ಪೂಜಾರಿ ಪುಣ್ಕೆತ್ಯಾರು ಅವರನ್ನು ಸನ್ಮಾನಿಸಲಾಯಿತು. 30 ವರ್ಷಗಳಾದ ಸ್ವ-ಸಹಾಯ ಸಂಘಗಳನ್ನು ಗುರುತಿಸಲಾಯಿತು. ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಅಳದಂಗಡಿ ವಲಯ ಮೇಲ್ವಿಚಾರಕಿ ಸುಮಂಗಳ ಸ್ವಾಗತಿಸಿದರು. ಸೇವಾಪ್ರತಿನಿಧಿ ಹರಿಣಾಕ್ಷಿ ಲತೀಶ್ ವರದಿ ಮಂಡಿಸಿದರು. ಕಾವ್ಯ ವಂದಿಸಿದರು. ಶೈಲೇಶ್ ಕಾರ್ಯಕ್ರಮ ನಿರೂಪಿಸಿದರು.
ಯೋಜನೆಯ ಮಾನವ ಸಂಪನ್ಮೂಲ ಯೋಜನಾಧಿಕಾರಿ ಶ್ರೀನಿವಾಸ ಮಾತನಾಡಿ, ತನ್ನ ಪ್ರಗತಿಗೆ ಇನ್ನೊಬ್ಬರ ಸಹಾಯ ಪಡೆದು ಉನ್ನತಿಯಾಗುವುದೇ ಪ್ರಗತಿ ಬಂಧು ಗುಂಪಿನ ಉದ್ದೇಶ. ಸಂಘದಲ್ಲಿ ಸಾಲ ಪಡೆದು ಅದನ್ನು ಯೋಗ್ಯವಾಗಿ ಬಳಸಿಕೊಂಡರೆ ದುಪ್ಪಟ್ಟು ಉಳಿತಾಯ ಮಾಡಿದಂತೆ. ಯೋಜನೆಯಿಂದಾಗಿ ಮನೆಯ ಒಲೆ ಉರಿದಿದೆ. ಅದನ್ನು ಯೋಜನೆಯ ವಿರುದ್ಧ ಬಳಸಬೇಡಿ ಎಂದರು.