ಅರಕಲಗೂಡು: ಹಿಂದುಗಳ ಪುಣ್ಯಕ್ಷೇತ್ರ ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡುತ್ತಿರುವ ದುಷ್ಕೃತ್ಯ ಖಂಡಿಸಿ ಆ. 31ರಂದು ಧರ್ಮಸ್ಥಳ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಮುಖಂಡ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನರಸೇಗೌಡ ತಿಳಿಸಿದರು.
ಸುಕ್ಷೇತ್ರ ಧರ್ಮಸ್ಥಳ ಹಿಂದುಗಳು ಪೂಜ್ಯ ಸ್ಥಳ. ಇಂತಹ ಪುಣ್ಯ ಕ್ಷೇತ್ರಕ್ಕೆ ಕೆಟ್ಟ ಹೆಸರು ತರಲು ಕೆಲವು ಕಿಡಿಗೇಡಿಗಳು ಸಂಚು ರೂಪಿಸಿದ್ದಾರೆ. ಎಸ್‌ಐಟಿ ಇಂತಹ ಕೃತ್ಯವನ್ನು ಬಯಲು ಮಾಡಿ ಸತ್ಯಾಸತ್ಯತೆ ಬಹಿರಂಗಪಡಿಸುತ್ತಿದೆ. ಅಪಪ್ರಚಾರ ಮೂಲಕ ಸುಕ್ಷೇತ್ರಕ್ಕೆ ಕಳಂಕ ತರುತ್ತಿರುವ ದುಷ್ಟ ಶಕ್ತಿಗಳನ್ನು ಪತ್ತೆಹಚ್ಚಿ ಆರೋಪಿಗಳನ್ನು ಕಠಿಣವಾದ ಕಾನೂನು ಶಿಕ್ಷೆಗೆ ಗುರಿಪಡಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಜಾಥಾ ನಡೆಯಲಿದೆ. ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಜೆಡಿಎಸ್ ಮುಖಂಡರು, ಸಹಸ್ರಾರು ಕಾರ್ಯಕರ್ತರು ಹಾಗೂ ಅಪಾರ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜೆಡಿಎಸ್ ಮುಖಂಡ ಎ.ಎಂ.ರಘು ಮಾತನಾಡಿ, ಪಟ್ಟಣದ ಚಿಲುಮೆ ಮಠದ ಭವನದ ಬಳಿ ಅಂದು ಬೆಳಗ್ಗೆ 8 ಗಂಟೆಗೆ ಉಪಾಹಾರ ಮುಗಿಸಿದ ಬಳಿಕ ಗ್ರಾಮದೇವತೆ ದೊಡ್ಡಮ್ಮ ದೇವಸ್ಥಾನದಲ್ಲಿ ಶಾಸಕ ಎ. ಮಂಜು ಜಾಥಾಗೆ ನೀಡಲಿದ್ದಾರೆ. ಜೆಡಿಎಸ್ ಮುಖಂಡರು, ಧರ್ಮಸ್ಥಳ ಮಂಜುನಾಥಸ್ವಾಮಿ ಭಕ್ತರು ವಾಹನಗಳಲ್ಲಿ ತೆರಳಲಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಮುಖಂಡರಾದ ವಕಾರೆ ರವಿಕುಮಾರ್, ಕಾಕೋಡನಹಳ್ಳಿ ಮಂಜು, ಶಾಬಾಜ್ ಸುದ್ದಿಗೋಷ್ಠಿಯಲ್ಲಿದ್ದರು.