

ಚನ್ನಪಟ್ಟಣ
ಧರ್ಮಸ್ಥಳ ಕೇವಲ ದೇವಾಲಯವಲ್ಲ. ಅದೊಂದು ನ್ಯಾಯಾಲಯ ಆಗಿದೆ. ವೀರೇಂದ್ರ ಹೆಗ್ಗಡೆಯವರು ಬಡವರ ಕಣ್ಣೀರು ಒರೆಸುವ ದೇವ ಮಾನವ ಆಗಿದ್ದಾರೆ ಎಂದು ಸಂಸದ ಡಾ. ಸಿ ಎನ್ ಮಂಜುನಾಥ್ ಬಣ್ಣಿಸಿದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಟ್ರಸ್ಟ್ ಹಾಗೂ ಜಿಲ್ಲಾ ಜನ ಜಾಗೃತಿ ವೇದಿಕೆ ವತಿಯಿಂದ ತಾಲೂಕಿನ ದೊಡ್ಡಮಳೂರು ಸಮೀಪದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ ಜಿಲ್ಲಾಮಟ್ಟದ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು..
ಧರ್ಮಸ್ಥಳ ಸಂಸ್ಥೆಯ ಸಾಮಾಜಿಕ ಕಳಕಳಿ ಕಾರ್ಯಕ್ರಮಗಳು ಅನನ್ಯ. ಮಹಿಳೆಯರ ಸಬಲೀಕರಣವಾದರೆ, ದೇಶ ಅಭಿವೃದ್ಧಿ ಆಗುತ್ತದೆ ಎಂಬ ಪರಿಕಲ್ಪನೆಯಿಂದ ಸಂಸ್ಥೆಯ ಮೂಲಕ ಲಕ್ಷಾಂತರ ಕುಟುಂಬಗಳಿಗೆ ಸಂಸ್ಥೆಯೂ ವಿವಿಧ ರೀತಿಯ ನೆರವು ನೀಡುತ್ತಿದೆ. ಈ ಮೂಲಕ ಶ್ರೀ ಕ್ಷೇತ್ರದ ವೀರೇಂದ್ರ ಹೆಗ್ಗಡೆ ಯವರು ದೇವರಾಗಿದ್ದಾರೆ. ದೇಶದ ಯಾವುದೇ ಮಠ ಹಾಗೂ ದೇವಾಲಯಗಳು ಮಾಡದ ಕೆಲಸವನ್ನು ದೇವರು ಭೂಮಿಗೆ ಕಳುಹಿಸಿರುವ ಈ ದೇವ ಮಾನವ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಮದ್ಯ ಪಾನ ಮಾರಾಟದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಇದು ಬಹಳ ಬೇಸರದ ಸಂಗತಿ. ಕುಡಿತದ ಚಟದಿಂದ ಹಲವಾರು ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ಬಂದಿದೆ. ಪಾನಮುಕ್ತ ಸಮಾಜ ನಿರ್ಮಿಸಬೇಕು ಎಂಬ ನಿಟ್ಟಿನಲ್ಲಿ ಧರ್ಮಸ್ಥಳ ಸಂಸ್ಥೆ ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ. ಸತ್ಯಕ್ಕೆ ಸಾಕ್ಷಿ ಕೇಳುವ ಕಾಲದಲ್ಲಿ ಇದ್ದೇವೆ. ಕ್ಷೇತ್ರದ ಸಮಾಜಸೇವೆಯ ಒಳ್ಳೆಯ ಕೆಲಸಕ್ಕೆ ಸಾಕಷ್ಟು ವಿಘ್ನ ಬರುತ್ತಿದೆ. ಆದರೆ, ಮಾಡುವ ಕೆಲಸ ನಾವು ಬಿಟ್ಟು ಹೋಗುವ ಹೆಜ್ಜೆ ಶಾಶ್ವತವಾಗಿಉಳಿಯುತ್ತದೆ ಎಂದರು.
ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ಒಂದು ಸರ್ಕಾರ ಮಾಡಬಹುದಾದ ಕೆಲಸಕಾರ್ಯಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ನಡೆಸಿಕೊಂಡು ಬರುತ್ತಿದೆ. ಶ್ರೀಕ್ಷೇತ್ರ ಯೋಜನೆಗಳು ಬಡವರ ಬದುಕಿಗೆ ನೆರವಾಗುತ್ತಿದೆ. ಗ್ರಾಮ ಸ್ವರಾಜ್ಯ ಕನಸನ್ನು ಈಡೇರಿಸಲು ಕ್ಷೇತ್ರದ ಧರ್ಮದರ್ಶಿಗಳು ಶ್ರಮಿಸುತ್ತಿದ್ದಾರೆ. ಸ್ವ ಉದ್ಯೋಗ ಸೃಷ್ಟಿಸುವ ಜೊತೆಗೆ, ಸಮುದಾಯದ ಅಭಿವೃದ್ಧಿಗೂ ತನ್ನದೇ ಆದ ಕೊಡುಗೆ ನೀಡುತ್ತಿದೆ. ಭಕ್ತರ ಭಾವನಾತ್ಮಕ ಸಂಬಂಧದ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಚೈತನ್ಯ ನೀಡುವ ಶಕ್ತಿಯಾಗಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಜಿಲ್ಲಾ ಯೋಜನಾ ನಿರ್ದೇಶಕ ಜಯಕರ ಶೆಟ್ಟಿ, ಸಂಸ್ಥೆಯ ಕಾರ್ಯಕ್ರಮಗಳು ಹಾಗೂ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು. ತಹಸೀಲ್ದಾರ್ ಬಿ.ಎನ್. ಗಿರೀಶ್ ಹಾಗೂ ಡಿವೈಎಸ್ಪಿ ಕೆ.ಸಿ.ಗಿರಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಗಾಂಧಿಭವನದ ಬಳಿಯಿಂದ ವೇದಿಕೆವರೆಗೂ ಸಂಸ್ಥೆಯ ಸದಸ್ಯರು ಬೃಹತ್ ಜಾಗೃತಿ ಜಾಥಾ ನಡೆಸಿದರು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ವಾಸಿಲ್ ಅಲಿಖಾನ್, ಸಂಸ್ಥೆಯ ತಾಲೂಕು ಯೋಜನಾ ನಿರ್ದೇಶಕಿ ರೇಷ್ಮಾ, ಜನಜಾಗೃತಿ ಸಮಿತಿಯ ಕೋಶಾಧ್ಯಕ್ಷ ವಿ.ಸಿ ಚಂದ್ರೇಗೌಡ, ಸಮಿತಿಯ ರಾಧಿಕಾ ರವಿಕುಮಾರ್ ಗೌಡ, ಹರೀಶ್ ಕುಮಾರ್, ಚಿಕ್ಕಣ್ಣಯ್ಯ ಸೇರಿದಂತೆ ಹಲವರು ಇದ್ದರು.