

ಹುಬ್ಬಳ್ಳಿ: ಚೆಂದವಾದ ಬದುಕು ಕಟ್ಟಿಕೊಳ್ಳಲು ಬೇರೆಲ್ಲ ವಸ್ತುಗಳು ಲಭಿಸುತ್ತವೆ. ಇವುಗಳಿಗಿಂತ ನಮ್ಮ ಮನಸ್ಸುಗಳನ್ನು ಸರಿಯಾಗಿಟ್ಟುಕೊಳ್ಳುವುದನ್ನು ಕಲಿಯಬೇಕು ಎಂದು ಉಡುಪಿ ಜಿಲ್ಲೆ ಕೋಟ ಯೋಗಬನದ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಎ. ವಿವೇಕ ಉಡುಪ ಹೇಳಿದರು.
ಹುಬ್ಬಳ್ಳಿ ವಿವೇಕ ಜಾಗೃತ ಬಳಗ ವತಿಯಿಂದ ಇಲ್ಲಿಯ ವಿದ್ಯಾನಗರದ ಶ್ರೀರಂಭಾಪುರಿ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ‘ಮನಃಶಾಂತಿ ವೈಭವ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ರಕ್ತ ಸಂಬಂಧಕ್ಕಿಂತ ಭಕ್ತ ಸಂಬಂಧ ದೊಡ್ಡದು. ಪ್ರತಿಯೊಬ್ಬರೂ ಭಕ್ತಿ, ಶ್ರದ್ಧೆ, ಕರ್ತವ್ಯಪ್ರಜ್ಞೆ, ಸಹನೆ-ಸಹಕಾರವನ್ನು ಹೊಂದಬೇಕು. ಇಂದಿನ ದಿನಗಳಲ್ಲಿ ಮನುಷ್ಯರಲ್ಲಿ ಖಿನ್ನತೆ, ಭಯ, ವಂಚನೆ ಮುಂತಾದ ಪ್ರಕರಣಗಳು ಹೆಚ್ಚುತ್ತಿದ್ದು, ಅದರ ನಿವಾರಣೆಗಾಗಿ ಪ್ರತಿಯೊಬ್ಬರೂ ಯೋಗ, ಧ್ಯಾನ, ಪ್ರಾಣಾಯಾಮ ಮುಂತಾದ ದೈಹಿಕ ಕ್ರಿಯೆಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಚಿಂತೆ, ಆಸೆ, ಕೋಪ, ಭಯ ಮತ್ತು ಆತಂಕಗಳು ಮುಂತಾದ ಪ್ರಸಂಗಗಳನ್ನು ನಿವಾರಿಸಿಕೊಳ್ಳಲು ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಭಗವದ್ಗೀತೆ, ರಾಮಾಯಣ, ಮಹಾಭಾರತ ಮುಂತಾದ ಆಧ್ಯಾತ್ಮಿಕ ಗ್ರಂಥಗಳನ್ನು ಓದಬೇಕು. ಹೃದಯ ಮತ್ತು ಮನಸ್ಸನ್ನು ವಿಶಾಲವಾಗಿಟ್ಟುಕೊಳ್ಳುವ ಮೂಲಕ ಸಮಾಜಕ್ಕೆ ಸತ್ಕಾರ್ಯಗಳನ್ನು ಮಾಡಬೇಕು ಎಂದರು.
ಸಾಲಿಗ್ರಾಮದ ಡಿವೈನ್ ಪಾರ್ಕ್ ಟ್ರಸ್ಟ್‌ನ ಟ್ರಸ್ಟಿ ಸಿಸ್ಟರ್ ನಿವೇದಿತಾರಾಜ್, ಭಜನೆಗಳನ್ನು ಹೇಳುವ ಮೂಲಕ ತಮ್ಮೆಲ್ಲರ ಸಂತಸವನ್ನು ಹೆಚ್ಚಿಸಿಕೊಳ್ಳಬೇಕೆಂದರಲ್ಲದೆ, ಸಂದರ್ಭಾನುಸಾರ ಭಕ್ತಿಗೀತೆಗಳನ್ನು ಹಾಡಿ ಭಕ್ತರ ಮನಸ್ಸನ್ನು ತೇಜಗೊಳಿಸಿದರು.
ಶ್ರೀರಾಮರಕ್ಷಾ ಸ್ತೋತ್ರ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ದಕ್ಷ ಸೇವಕಿ ಡಾ. ಪಂಕಜಾ ಎಂ. ಬ್ಯಾಕೋಡಿ ನಿರೂಪಿಸಿದರು. ಪ್ರೀತಿ ಮಠಪತಿ ಅತಿಥಿಗಳನ್ನು ಪರಿಚಯಿಸಿದರು. ವಿ.ವಿ. ಸ್ಥಾವರಮಠ ವಂದಿಸಿದರು. ಸೇವಾರ್ಥಿಗಳಿಗೆ ಅತಿಥಿಗಳು ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. 1800ಕ್ಕೂ ಹೆಚ್ಚಿನ ಭಕ್ತರು ಕಾರ್ಯಕ್ರಮದ ಪ್ರಯೋಜನ ಪಡೆದರು.