ಪ್ರಸಕ್ತ ಶೈಕ್ಷಣಿಕ (New college)ವರ್ಷದಿಂದ ಪದವಿ ಪೂರ್ವ ಕಾಲೇಜ್ ಆರಂಭಗೊಳ್ಳಲಿರುವ ಹುಬ್ಬಳ್ಳಿ ಬಿಡನಾಳದ ಆರ್.ಕೆ. ಪಾಟೀಲ ಪಬ್ಲಿಕ್ ಸ್ಕೂಲ್ಗೆ ಶಾಸಕ ಪ್ರಸಾದ ಅಬ್ಬಯ್ಯ ಶನಿವಾರ ಭೇಟಿ ನೀಡಿ ಮೂಲಸೌಕರ್ಯಗಳನ್ನು ಪರಿಶೀಲಿಸಿದರು.
ಹುಬ್ಬಳ್ಳಿ: ಬಿಡನಾಳದ (New college) ಆರ್.ಕೆ. ಪಾಟೀಲ ಪಬ್ಲಿಕ್ ಸ್ಕೂಲ್ ಉನ್ನತೀಕರಿಸಿದ ಪರಿಣಾಮ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪದವಿ ಪೂರ್ವ ಕಾಲೇಜ್ ಆರಂಭಗೊಳ್ಳಲಿದೆ. ಆ ಮೂಲಕ ಹು- ಧಾ ಪೂರ್ವ ಕ್ಷೇತ್ರದಲ್ಲಿ ಸರ್ಕಾರಿ ಕಾಲೇಜು ಆಗಬೇಕೆಂಬ ಬೇಡಿಕೆ ಈಡೇರಿದೆ ಎಂದು ಸ್ಲಂ ಬೋರ್ಡ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಬಿಡನಾಳದ ಆರ್.ಕೆ. ಪಾಟೀಲ ಪಬ್ಲಿಕ್ ಸ್ಕೂಲ್ಗೆ ಶನಿವಾರ ಭೇಟಿ ನೀಡಿ ನೂತನವಾಗಿ ಆರಂಭಿಸುವ ಕಾಲೇಜು ಕಟ್ಟಡ ಹಾಗೂ ಮೂಲಸೌಕರ್ಯ ಪರಿಶೀಲಿಸಿ ಮಾತನಾಡಿದ ಅವರು, ಪೂರ್ವ ಕ್ಷೇತ್ರದಲ್ಲಿ ಸಾಕಷ್ಟು ಬಡ ಜನರು ವಾಸಿಸುತ್ತಿದ್ದಾರೆ. 46ಕ್ಕೂ ಹೆಚ್ಚು ಕೊಳೆಗೇರಿ ಪ್ರದೇಶಗಳು ಇಲ್ಲಿವೆ. ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಖಾಸಗಿ ಶಿಕ್ಷಣ ಸಾಕಷ್ಟು ದುಬಾರಿಯಾಗಿದೆ. ಈ ಭಾಗಕ್ಕೆ ಪದವಿ ಪೂರ್ವ ಕಾಲೇಜು ಮಂಜೂರು ಮಾಡಲೇಬೇಕು ಎಂದು ಶಿಕ್ಷಣ ಸಚಿವರಲ್ಲಿ ಒತ್ತಡ ಹಾಕಲಾಗಿತ್ತು. ಅದರ ಪರಿಣಾಮ ಸರ್ಕಾರ ಆರ್.ಕೆ. ಪಾಟೀಲ ಪಬ್ಲಿಕ್ ಸ್ಕೂಲ್ನ್ನು ಕಾಲೇಜನ್ನಾಗಿ ಉನ್ನತೀಕರಣ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಈ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ ಮತ್ತು ಗಣಕ ವಿಜ್ಞಾನ ಸಂಯೋಜನೆಯನ್ನು ಮಂಜೂರು ಮಾಡಲಾಗಿದೆ. ಪ್ರಥಮ ಭಾಷೆಯಾಗಿ ಕನ್ನಡ ಮತ್ತು ದ್ವಿತೀಯ ಭಾಷೆಯಾಗಿ ಇಂಗ್ಲಿಷ್ ವಿಷಯಗಳನ್ನು ಬೋಧಿಸಲು ಅವಕಾಶ ನೀಡಲಾಗಿದೆ. ಈ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಜ್ಞಾನ ವಿಭಾಗ ಆರಂಭಕ್ಕೂ ಮಂಜೂರಾತಿ ನೀಡಬೇಕೆಂದು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಶೀಘ್ರವೇ ವಿಜ್ಞಾನ ವಿಭಾಗಕ್ಕೆ ಮಂಜೂರಾತಿ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.