

ಹುಬ್ಬಳ್ಳಿ: ಶಿಕ್ಷಕರು ತಮ್ಮ ನಡೆ-ನುಡಿಗಳ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಕರ್ನಾಟಕ ಮೈನಾರಿಟಿ ಎಜುಕೇಶನ್ ವಿಷನ್ ಕಮಿಟಿ ಸದಸ್ಯ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಹಿರಿಯ ಉಪನ್ಯಾಸಕ ಡಾ. ಶೌಕತ ಅಜೀಮ್ ಹೇಳಿದರು.
ಸನಾ ಗ್ರುಪ್ ಆಫ್ ಇನ್ಸ್ಟಿಟ್ಯೂಷನ್ಸ್ ವತಿಯಿಂದ ಅಂತಿಮ ವರ್ಷದ ಬಿ.ಇಡಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಷಯ ಜ್ಞಾನ, ತಾಳ್ಮೆ, ಸಮರ್ಪಣ ಮನೋಭಾವ, ಪ್ರಾಮಾಣಿಕತೆ, ಸಹಾನುಭೂತಿ ಹಾಗೂ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವ ಸಾಮರ್ಥ್ಯ ಆದರ್ಶ ಶಿಕ್ಷಕರಿಗೆ ಇರಬೇಕು ಎಂದು ಸಲಹೆ ನೀಡಿದರು.
ಶಿಕ್ಷಕರು ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಬೆಳೆಸುವ ಕಲಿಕಾ ವಾತಾವರಣ ನಿರ್ಮಿಸಬೇಕು ಎಂದರು.
ವಿದ್ಯಾರ್ಥಿಗಳು ನಿರಂತರವಾಗಿ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ನವೀನ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಗುಣಮಟ್ಟದ ಶಿಕ್ಷಣದ ಮೂಲಕ ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸನಾ ಗ್ರುಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ಕಾರ್ಯನಿರ್ವಾಹಕ ಟ್ರಸ್ಟಿ ಮುಹಮ್ಮದ್ ಅಯೂಬ್ ಖಾನ್ ಸವಣೂರ ಮಾತನಾಡಿ, ಸನಾ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವು ಜೀವನದ ಕೊನೆಯ ಉಸಿರಿನವರೆಗೂ ಮುಂದುವರಿಯುತ್ತದೆ ಎಂದರು.
ಸಂಸ್ಥೆಯ ಟ್ರಸ್ಟಿ ಮೊಹಮ್ಮದ್ ತಾರೀಕ್ ಮುಜಾಹಿದ್ ಮಾತನಾಡಿದರು.