ಹುಬ್ಬಳ್ಳಿ ಕೇಶ್ವಾಪುರದ (IT Act) ಐಸಿಎಐ ಭವನದಲ್ಲಿ ಹೊಸ ಆದಾಯ ತೆರಿಗೆ ಕಾಯ್ದೆ -2025ರ ಕುರಿತ ಎರಡು ದಿನಗಳ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಿಷಭ್ ಉಪಾಧ್ಯಾಯ, ಅನಂತ ನ್ಯಾಮಣ್ಣವರ, ವಿರೂಪಾಕ್ಷ ಹಿಪ್ಪರಗಿ, ಆದರ್ಶ ಹಿರೇಮಠ, ಸಂತೋಷಕುಮಾರ್ ಪಾಟೀಲ, ಇತರರು ಇದ್ದರು.
ಹುಬ್ಬಳ್ಳಿ: ಹಳೆಯ ಆದಾಯ ತೆರಿಗೆ (IT Act)ಕಾಯ್ದೆ -1961 ಸುಮಾರು 65 ವರ್ಷಗಳ ಹಿಂದೆ ಜಾರಿಗೆ ಬಂದಿದ್ದು, ಸುಮಾರು 4 ಸಾವಿರ ತಿದ್ದುಪಡಿಗಳನ್ನು ಕಂಡಿವೆ. ಇದೀಗ ಕೇಂದ್ರ ಸರ್ಕಾರ ಹೊಸ ಆದಾಯ ತೆರಿಗೆ ಕಾಯ್ದೆ-2025 ಜಾರಿಗೆಗೊಳಿಸುವ ಮೂಲಕ ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ತರಲು ಪ್ರಯತ್ನ ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಕೇಶ್ವಾಪುರದ ಐಸಿಎಐ ಭವನದಲ್ಲಿ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಹುಬ್ಬಳ್ಳಿ ಶಾಖೆ ಶುಕ್ರವಾರ ಏರ್ಪಡಿಸಿದ್ದ ಹೊಸ ಆದಾಯ ತೆರಿಗೆ ಕಾಯ್ದೆ -2025 ಕುರಿತ ಎರಡು ದಿನಗಳ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತದ ಅರ್ಥಕ ವಲಯವು ಡಿಜಿಟಲ್ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿ ಇದೆ ಎಂದರು.
ಉದ್ಯಮ, ವ್ಯವಹಾರ ಸುಲಭವಾಗಿ ನಡೆಯುವಂತೆ ವೇದಿಕೆ ಕಲ್ಪಿಸಲಾಗುತ್ತಿದೆ. ಆದ್ದರಿಂದ ಅನಾವಶ್ಯಕ ನಿಯಮಗಳನ್ನು ಕಿತ್ತಾಕಿ ಸುಧಾರಿತ ನಿಯಮಗಳನ್ನು ಜಾರಿಗೆ ತರಲಾಗಿದೆ. ಆದಾಯ ತೆರಿಗೆ ಕಾಯ್ದೆಯಡಿ ತೆರಿಗೆದಾರರ ಮೇಲಿನ ಅನುಸರಣೆ ಭಾರವನ್ನು ಕಡಿಮೆ ಮಾಡುವುದು, ನ್ಯಾಯಾಂಗ ವ್ಯಾಜ್ಯಗಳನ್ನು ತಗ್ಗಿಸುವುದು ಹಾಗೂ ವಿವಿಧ ತೊಡಕಾಗಿರುವ ಕಾನೂನು ಸರಳಗೊಳಿಸುವುದಕ್ಕೆ ಗಮನ ಹರಿಸಲಾಗಿದೆ ಎಂದು ಹೇಳಿದರು.
ಐಸಿಎಐ ಹುಬ್ಬಳ್ಳಿ ಶಾಖೆಯ ಅಧ್ಯಕ್ಷ ರಿಷಭ್ ಉಪಾಧ್ಯಾಯ, ಕಾರ್ಯದರ್ಶಿ ಅನಂತ ನ್ಯಾಮಣ್ಣವರ, ವಿರೂಪಾಕ್ಷ ಹಿಪ್ಪರಗಿ, ಆದರ್ಶ ಹಿರೇಮಠ, ಸಂತೋಷಕುಮಾರ್ ಪಾಟೀಲ, ಇತರರು ಇದ್ದರು.