

ಕಲಘಟಗಿ: ಅನ್ನಭಾಗ್ಯ ಯೋಜನೆಯಡಿ (ration) ಜನ ಸಾಮಾನ್ಯರಿಗೆ ನೀಡಲಾಗುತ್ತಿರುವ ಪಡಿತರ ಅಕ್ಕಿಯನ್ನ ಸಮಯಕ್ಕೆ ಸರಿಯಾಗಿ ವಿತರಿಸುತ್ತಿಲ್ಲ. ಪ್ರತಿ ಕಾರ್ಡ್‌ಗೂ ತಲಾ ಒಂದರಿಂದ ಎರಡು ಕೆಜಿ ಧಾನ್ಯವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅನ್ನಭಾಗ್ಯ ಫಲಾನುಭವಿಗಳು ತಾಲೂಕಿನ ಚಳಮಟ್ಟಿ ಗ್ರಾಮದ ನ್ಯಾಯಬೇಲೆ ಅಂಗಡಿಗೆ ಮುತ್ತಿಗೆ ಹಾಕಿ ಶನಿವಾರ ಪ್ರತಿಭಟನೆ ನಡೆಸಿದರು.
ಪ್ರತಿ ಕಾರ್ಡ್‌ನಲ್ಲಿ ಒಂದರಿಂದ ಎರಡು ಕೆಜಿ ಅಕ್ಕಿ ಕಡಿತವಾಗುತ್ತಿದೆ. ಅಕ್ಕಿಯನ್ನು ತಿಂಗಳಲ್ಲಿ ಒಂದೇ ದಿನ ಮಾತ್ರ ನೀಡುತ್ತಿದ್ದಾರೆ. 1 ತಿಂಗಳು ಹೆಬ್ಬೆಟ್ಟು ತೆಗೆದುಕೊಂಡರೆ ಎರಡರಿಂದ ಮೂರು ತಿಂಗಳು ಕಾಯಿಸಿ ನಂತರ ಅಕ್ಕಿ ವಿತರಣೆ ಮಾಡುತ್ತಾರೆ. ಸಾರ್ವಜನಿಕರು ಪ್ರಶ್ನಿಸಿದರೆ ‘ಯಾರ ಹತ್ರ ಹೇಳ್ತೀರಾ ಹೇಳ್ಕೊಳಿ’ ಈ ತಿಂಗಳು ಅಕ್ಕಿ ಕೊಡುವುದಿಲ್ಲ ಎಂದು ಬೆದರಿಕೆ ಹಾಕುತ್ತಾರೆ. ಈ ಕುರಿತು ಅನೇಕ ಬಾರಿ ಕಲಘಟಗಿ ಆಹಾರ ನಿರೀಕ್ಷಕರಿಗೆ ತಿಳಿಸಿದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
3 ರಿಂದ ನಾಲ್ಕು ತಿಂಗಳಿಗೊಮ್ಮೆ ಗಾಡಿ ಬಾಡಿಗೆಗೆ ಅಂತಾ ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಾರೆ. ಸಮರ್ಪಕವಾಗಿ ಪಡಿತರ ವಿತರಿಸಲ್ಲ. ನ್ಯಾಯಬೆಲೆ ಆಂಗಡಿ ಹೋದಾಗ ಯಾವಾಗಲೂ ಸರ್ವರ್ ಸಮಸ್ಯೆ ಎನ್ನುವ ಸಿದ್ಧ ಉತ್ತರ ಕೊಟ್ಟು ವಾಪಸ್ ಕಳಿಸುತ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಮಸ್ಯೆ ಕೇವಲ ಚೆಳಮಟ್ಟಿ ಗ್ರಾಮಕ್ಕೆ ಸೀಮಿತವಾಗಿಲ್ಲ. ಕಲಘಟಗಿ ತಾಲೂಕಿನ ಹಲವು ಗ್ರಾಮಗಳಲ್ಲಿಯೂ ಇಂತಹ ಸಮಸ್ಯೆಗಳು ಎದುರಾಗುತ್ತಿವೆ. ಸಂಬಂದಪಟ್ಟ ಅಧಿಕಾರಿಗಳು ಕೂಡಲೇ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಫಲಾನುಭವಿಗಳಿಗೆ ಸಮರ್ಪಕವಾಗಿ ಪಡಿತರ ವಿತರಿಸುವಂತೆ ಕ್ರಮ ಕೈಗೊಳ್ಳಬೇಕು ಎನ್ನುವುದು ಫಲಾನುಭವಿಗಳ ಆಗ್ರಹವಾಗಿದೆ.
ತಿಂಗಳಿಗೆ ಒಂದೇ ದಿನ ಪಡಿತರ ಅಕ್ಕಿಯನ್ನು ವಿತರಣೆ ಮಾಡುತ್ತಿರುವುದರಿಂದ ಕೂಲಿ ಕೆಲಸಕ್ಕೆ ಹೋಗುವವರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಒಂದು ದಿನ ಬಾರದೆ ಇದ್ದರೆ ಮುಂದಿನ ತಿಂಗಳು ಬರುವಂತೆ ಹೇಳಿ ಕಳಿಸುತ್ತಾರೆ.