ಅವಹೇಳನಕಾರಿ (HDMC Protest) ಹೇಳಿಕೆ ಖಂಡಿಸಿ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ಗುರುವಾರ (HDMC Protest) ಪ್ರತಿಭಟನಾ ನಿರತ ಪಾಲಿಕೆ ನೌಕರರು, ಗುತ್ತಿಗೆದಾರ ಶರದ್ ದೊಡ್ಡಮನಿಯನ್ನು ತರಾಟೆಗೆ ತೆಗೆದುಕೊಂಡರು.
ಹುಬ್ಬಳ್ಳಿಯಲ್ಲಿ ಗುರುವಾರ (HDMC Protest) ಪ್ರತಿಭಟನಾ ನಿರತ ಪಾಲಿಕೆ ನೌಕರರು, ಗುತ್ತಿಗೆದಾರ ಶರದ್ ದೊಡ್ಡಮನಿಯನ್ನು ತರಾಟೆಗೆ ತೆಗೆದುಕೊಂಡರು.
Published on
ಹುಬ್ಬಳ್ಳಿ: ಎಸ್​ಐಆರ್ ನೆಪದಲ್ಲಿ (HDMC Protest) ಸಾರ್ವಜನಿಕ ಕೆಲಸಗಳನ್ನು ಬದಿಗಿಟ್ಟು ಮಜಾ ಮಾಡುತ್ತಿದ್ದಾರೆ ಎಂಬ ಗುತ್ತಿಗೆದಾರನ ಹೇಳಿಕೆಯನ್ನು ಖಂಡಿಸಿ ಹು-ಧಾ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ನೌಕರರು ಗುರುವಾರ ಬೆಳಗ್ಗೆ ಇಲ್ಲಿಯ ಪಾಲಿಕೆ ಕಚೇರಿ ಆವರಣದಲ್ಲಿ ಹಠಾತ್ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳದಲ್ಲಿದ್ದ ಗುತ್ತಿಗೆದಾರ ಶರದ್ ದೊಡ್ಡಮನಿ ಕಡಿಮೆ ರಕ್ತದೊತ್ತಡದಿಂದ ಪ್ರಜ್ಞೆ ತಪ್ಪಿ ಬಿದ್ದು ಆಸ್ಪತ್ರೆಗೆ ದಾಖಲಾದ ಘಟನೆ ಸಹ ನಡೆದಿದೆ.
ಬೆಳಗ್ಗೆ ಕಚೇರಿಗೆ ಬಂದ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಹು-ಧಾ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಪ್ರಸಾದ ಪೆರೂರ ನೇತೃತ್ವದಲ್ಲಿ ಪ್ರತಿಭಟನೆಗೆ ಇಳಿದರು. ಗುತ್ತಿಗೆದಾರ ಶರದ್ ದೊಡ್ಡಮನಿಯನ್ನು ಬಂಧಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ, ಅವರ ಗುತ್ತಿಗೆ ಪರವಾನಿಗೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಪಟ್ಟು ಹಿಡಿದರು. ದೊಡ್ಡಮನಿ ವಿರುದ್ಧ ಧಿಕ್ಕಾರದ ಘೊಷಣೆ ಕೂಗಿದರು.
ಸ್ಥಳಕ್ಕೆ ಬಂದ ಶರದ ಅವರ ವಿರುದ್ಧ ಧಿಕ್ಕಾರ ಕೂಗಿ ತರಾಟೆಗೆ ತೆಗೆದುಕೊಂಡರು. ಈ ವೇಳೆ ತಾವು ನೀಡಿದ್ದ ಹೇಳಿಕೆಗೆ ಗುತ್ತಿಗೆದಾರ ದೊಡ್ಡಮನಿ ಕ್ಷಮೆಯಾಚಿಸಿದರು. ಇದಕ್ಕೆ ಒಪ್ಪದ ನೌಕರರು, ದೊಡ್ಡಮನಿಯವರನ್ನು ಬಂಧಿಸದ ಹೊರತು ಪ್ರತಿಭಟನೆ ಕೈ ಬಿಡುವುದಿಲ್ಲ ಎಂದರು. ಈ ವೇಳೆ ನಿಂತಿದ್ದ ಸ್ಥಳದಲ್ಲಿಯೇ ದೊಡ್ಡಮನಿ ಪ್ರಜ್ಞೆ ತಪ್ಪಿ ಕೆಳಗಿ ಬಿದ್ದರು. ಪೊಲೀಸರು, ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಅವರನ್ನು ಚಿಕಿತ್ಸೆಗೆ ಚಿಟಗುಪ್ಪಿ ಆಸ್ಪತ್ರೆಗೆ ದಾಖಲಿಸಿದರು.
ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಪ್ರಸಾದ ಪೆರೂರ ಮಾತನಾಡಿ, ಎಸ್​ಐಆರ್ ಪ್ರಕ್ರಿಯೆಯಡಿ ನಾವು ರಜೆ ದಿನವೂ ಕೆಲಸ ಮಾಡುತ್ತಿದ್ದೇವೆ. ದೊಡ್ಡಮನಿ ಅವರ ಹೇಳಿಕೆಯು ಪಾಲಿಕೆ ಹಾಗೂ ನೌಕರರ ಘನತೆಗೆ ಧಕ್ಕೆ ತಂದಿದೆ. ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆ ಆಗುತ್ತದೆ. ಅವರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ನೌಕರರ ಸಂಘದ ಶ್ರೀನಾಥ ಪವಾರ, ಅರುಣ ಎಚ್.ಡಿ., ಪ್ರವೀಣ ಬಾಗಲಕೋಟಿ, ರಾಜಕುಮಾರ ಹಾವೇರಿ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net