ಹುಬ್ಬಳ್ಳಿಯ ಸೋನಿಯಾಗಾಂಧಿ ನಗರದಲ್ಲಿ (concrete road)ಮುಖ್ಯಮಂತ್ರಿಯವರ 5 ಕೋಟಿ ರೂ. ವಿಶೇಷ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಪ್ರಸಾದ ಅಬ್ಬಯ್ಯ ಭೂಮಿ ಪೂಜೆ ನೆರವೇರಿಸಿದರು.
ಹುಬ್ಬಳ್ಳಿ: ಹು-ಧಾ ಪೂರ್ವ ಕ್ಷೇತ್ರದಲ್ಲಿ(concrete road) ಶಿಕ್ಷಣ, ಆರೋಗ್ಯ, ಆಶ್ರಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕ್ಷೇತ್ರದಲ್ಲಿ ಮೂಲಸೌಕರ್ಯ ಒದಗಿಸಲು ಅನುದಾನದ ಕೊರತೆ ಇಲ್ಲ ಎಂದು ಸ್ಲಂ ಬೋರ್ಡ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಸೋನಿಯಾಗಾಂಧಿ ನಗರದಲ್ಲಿ ಮುಖ್ಯಮಂತ್ರಿಯವರ ವಿಶೇಷ ಅನುದಾನ 5 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತ್ತಿದೆ ಎಂದರೆ ಅದು ಕಾಂಗ್ರೆಸ್ ಸರ್ಕಾರವನ್ನು ಮತ್ತೆ ಅಧಿಕಾರದಲ್ಲಿ ತಂದಿರುವುದರ ಫಲ ಎಂಬುದು ಯಾರು ಮರೆಯಬಾರದು. ಬಿಜೆಪಿ ಆಡಳಿತದ ಸಂದರ್ಭದಲ್ಲಿ ಅನುದಾನ ಕೊರತೆಯಿತ್ತು. ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿದ್ದವು. ಆದರೆ ಈ ಮೂರು ವರ್ಷದಲ್ಲಿ ನೂರಾರು ಕೋಟಿ ರೂ. ಅನುದಾನ ತಂದು ಮತ್ತಷ್ಟು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಪೂರ್ವ ಕ್ಷೇತ್ರದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ಇರಲಿಲ್ಲ. ಈಗ ಪದವಿ ಪೂರ್ವ ಕಾಲೇಜ್ ಮಂಜೂರು ಆಗಿದೆ. ವಾಣಿಜ್ಯ ವಿಭಾಗವನ್ನು ಪ್ರಾರಂಭ ಮಾಡಲಾಗಿದೆ. ವಿಜ್ಞಾನ ವಿಭಾಗವನ್ನು ಕೂಡ ಪ್ರಾರಂಭಿಸಲು ಮಂಜೂರಾತಿ ಸಿಗಲಿದೆ. ಇದು ಈ ಭಾಗದ ಬಹುದಿನದ ಬೇಡಿಕೆಯಾಗಿತ್ತು. ಮಹಿಳಾ ಕಾಲೇಜ್ ಸ್ಥಾಪನೆಗೆ ಪ್ರಸ್ತಾವನೆ ಕೂಡ ಸಲ್ಲಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಮೋಹನ ಅಸುಂಡಿ, ಪಾಲಿಕೆ ಸದಸ್ಯೆ ಲಕ್ಷ್ಮೀಭಾಯಿ ಜಾಧವ, ವಿಜನಗೌಡ ಪಾಟೀಲ, ಹಜರತ ಮುನಸಿ, ಅಲ್ತಾಫ್ ಮುಲ್ಲಾ, ಇತರರು ಇದ್ದರು.